ದೊಡ್ಡಬಳ್ಳಾಪುರ: ಮನುಷ್ಯರ ತಪ್ಪಿನಿಂದಾಗಿ ಎರಡು ಪಕ್ಷಿಗಳು ಕೆರೆಯ ನೀರಿನಲ್ಲಿ ಕುಳಿತು ಆಹಾರ ಇಲ್ಲದೆ ಪರಿತಪಿಸುತ್ತ ಜೀವ ಬಿಡಲು ದಿನ ಎಣಿಸುತ್ತಿರುವ ಹೃದಯವಿದ್ರಾವಕ ದೃಶ್ಯವನ್ನು ಪಕ್ಷಿಗಳ ಛಾಯಾಚಿತ್ರ ಗ್ರಾಹಕ ಮಾನ್ಸೂನ್ ಪ್ರಶಾಂತ್ ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಸೆರೆಹಿಡಿದಿದ್ದಾರೆ.
ನಗರದ ಕರೇನಹಳ್ಳಿ ಭಾಗದಿಂದ ಹರಿದು ಬರುವ ಚರಂಡಿ ನೀರು ಅರಳುಮಲ್ಲಿಗೆ ಕೆರೆಯ ಪೂರ್ವ ಭಾಗದಲ್ಲಿ ದಟ್ಟವಾಗಿ ಬೆಳೆದುವ ಹೊಂಗೆ ಗಿಡಗಳ ನಡುವಿನ ಗುಂಡಿಗಳಲ್ಲಿ ನಿಲ್ಲುತ್ತಿವೆ. ಈ ನೀರಿನಲ್ಲಿ ಹಾವು ಪಕ್ಷಿ (ಡಾಟರ್) ಆಹಾರ ಹುಡುಕುವಾಗ ಕೊಕ್ಕಿಗೆ ಪ್ಲಾಸ್ಟಿಕ್ ದಾರ ಬಲವಾಗಿ ಸುತ್ತಿಕೊಂಡಿದೆ. ಹಾವು ಪಕ್ಷಿ ದಾರವನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟು ಅದು ಮತ್ತಷ್ಟು ಸಿಕ್ಕಾಗಿ ಕೊಕ್ಕನ್ನು ಬಲವಾಗಿ ಸುತ್ತಿಕೊಂಡಿದೆ. ಈಗ ಪಕ್ಷಿ ಕೊಕ್ಕನ್ನು ಹಗಲಿಸಿ ಆಹಾರ ಹುಡುಕಲು, ತಿನ್ನಲು ಸಾಧ್ಯಗಾದೆ ಪರಿತಪಿಸುತ್ತಿದೆ. ಪಕ್ಷಿಯನ್ನು ಹೇಗಾದರು ಮಾಡಿ ಹಿಡಿದು ದಾರವನ್ನು ಬಿಡಿಸಲು ಪಟ್ಟ ಎಲ್ಲಾ ಪ್ರಯತ್ನಗಳು ವಿಫಲವಾದವು. ಈ ಸುಂದರ ಪಕ್ಷಿ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿರುವುದು ದುಃಖದ ಸಂಗತಿ ಎನ್ನುತ್ತಾರೆ ಪ್ರಶಾಂತ್.
ಹಾವು ಪಕ್ಷಿಯಂತೆ ಇದೇ ಸ್ಥಳದಲ್ಲಿ ಕಂಡ ಮತ್ತೊಂದು ಪಕ್ಷಿ ನೀರು ಕಾಗೆಯ(ಕಾರ್ಮೊರೆಟ್) ರೆಕ್ಕೆ, ಕಾಲುಗಳಿಗೆ ನೈಲಾನ್ ದಾರಗಳು ಸುತ್ತಿಕೊಂಡಿದ್ದು, ಕಷ್ಟ ಪಟ್ಟು ಹಾರಾಟ ನಡೆಸುತ್ತ ಆಹಾರಕ್ಕಾಗಿ ನಡೆಸುತ್ತಿದ್ದ ಹುಡುಕಾಟ ಮನಕಲಕುವಂತಿತ್ತು.
ನಗರದಿಂದ ಕೆರೆ ಅಂಗಳಕ್ಕೆ ಹರಿದು ಬರುತ್ತಿರುವ ಚರಂಡಿ ನೀರಿನಲ್ಲಿ ಹಾಗೂ ಅಕ್ರಮವಾಗಿ ಕೆರೆಗೆ ತಂದು ಸುರಿಯುತ್ತಿರುವ ತ್ಯಾಜ್ಯದ ಕಸದ ರಾಶಿಯಿಂದ ಮಳೆ ಬಂದಾದ ಹರಿದು ಬಂದು ಸೇರುತ್ತಿರುವ ಪ್ಲಾಸ್ಟಿಕ್ ವಸ್ತುಗಳು, ನೈಲಾನ್ ದಾರ, ಹಳೇ ಬಟ್ಟೆಗಳು ಪಕ್ಷಿಗಳ ಪ್ರಾಣಕ್ಕೆ ಕುತ್ತುತರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.