ADVERTISEMENT

ಬಿಜೆಪಿ ಕಾರ್ಯಕರ್ತರ ಬೈಕ್ ರ‍್ಯಾಲಿ

ಮೋದಿ ಮತ್ತೊಮ್ಮೆ ಪ್ರಧಾನಿ ಮಾಡಲು ಜನಜಾಗೃತಿಗಾಗಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 13:00 IST
Last Updated 2 ಮಾರ್ಚ್ 2019, 13:00 IST
ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು
ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು   

ವಿಜಯಪುರ: ಚುನಾವಣಾ ಪೂರ್ವದಲ್ಲಿ ಜನರಿಗೆ ಕೊಟ್ಟಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ ಹೇಳಿದರು.

ಇಲ್ಲಿನ ಶಿವಗಣೇಶ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಬೈಕ್ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ಈಗ ದೇಶವು ಸುಭದ್ರವಾಗಿದೆ. ಇತರೆ ದೇಶಗಳ ಮುಂದೆ ಸಮರ್ಥವಾಗಿದೆ. ಆರ್ಥಿಕತೆಯಲ್ಲಿ ಹೆಚ್ಚು ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಈ ಬಾರಿಯೂ ಜನರು ಮೋದಿ ಪ್ರಧಾನಿಯಾಗುವುದನ್ನು ಕಾಯುತ್ತಿದ್ದಾರೆ. ಇದನ್ನು ಸಹಿಸಲಿಕ್ಕೆ ಸಾಧ್ಯವಾಗದ ರಾಜಕೀಯ ಪಕ್ಷಗಳು ಘಟಬಂಧನ್ ಹೆಸರಿನಲ್ಲಿ ಒಗ್ಗೂಡುತ್ತಿವೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೈಕ್ ರ‍್ಯಾಲಿ ನಡೆಸುತ್ತಿದ್ದೇವೆ ಎಂದರು.

ADVERTISEMENT

ನುಗ್ಗಿದ ಬೈಕ್‌ಗಳು:ಶಿವಗಣೇಶ ಸರ್ಕಲ್‌ಗೆ ಹಾರೋಹಳ್ಳಿಯ ಮೂಲಕ ಬಂದ ಬೈಕ್ ರ‍್ಯಾಲಿಯು ಇಲ್ಲಿಂದ ಹಳೇ ಕೆನರಾ ಬ್ಯಾಂಕ್ ರಸ್ತೆಯ ಮೂಲಕ ಗಾಂಧಿಚೌಕದ ಮೂಲಕ ಹೋಗಬೇಕು ಎಂದು ಸಜ್ಜುಗೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಇದಕ್ಕೆ ಅವಕಾಶ ನೀಡಲು ನಿರಾಕರಿಸಿದರು.

‘ನೀವು ಯಾವ ಮಾರ್ಗದಲ್ಲಿ ಅನುಮತಿ ಪಡೆದುಕೊಂಡಿದ್ದೀರೋ ಅದೇ ಮಾರ್ಗದಲ್ಲಿ ಹೋಗಿ ನಮ್ಮ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಹೋದರೆ ಜನರಿಗೆ ತೊಂದರೆಯಾಗುತ್ತದೆ’ ಎಂದು ಪೊಲೀಸರು ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ ಅವರಿಗೆ ವಿವರಿಸಿದರು. ಆದರೆ, ಅದನ್ನು ಗಮನಿಸದೆ ನುಗ್ಗಿದ ಬೈಕ್ ಸವಾರರು, ಪೊಲೀಸರ ಬೈಕ್‌ಗಳಿಗೆ ತಗುಲಿಸಿಕೊಂಡು ಗಾಂಧಿಚೌಕದ ಕಡೆಗೆ ನುಗ್ಗಿದರು.

ಎಲ್ಲ ಬೈಕ್‌ಗಳು ಏಕಾಏಕಿ ನುಗ್ಗಿದ್ದರಿಂದ ಪೊಲೀಸರು ಬೇಸರದಿಂದಲೇ ಅವರನ್ನು ಹಿಂಬಾಲಿಸಿದರು. ಬಿಜೆಪಿ ಜಿಲ್ಲಾ ಘಟಕದ ರೈತ ಮೋರ್ಚಾ ಅಧ್ಯಕ್ಷ ಎನ್.ರಾಜಗೋಪಾಲ್, ಮುಖಂಡರಾದ ನಾಗರಾಜ್, ಉಸ್ತುವಾರಿ ಕನಕರಾಜು, ರವಿಕುಮಾರ್, ದೇವರಾಜ್, ಮನೋಹರ್, ಸಾಗರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.