ADVERTISEMENT

ಸಿ.ಬಿ.ಐ ದಾಳಿ: ಡಿಕೆಶಿ ಮುಗಿಸಲು ಬಿಜೆಪಿ ಸಂಚು- ಕೆ.ಸಿ.ಮಂಜುನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 2:11 IST
Last Updated 7 ಅಕ್ಟೋಬರ್ 2020, 2:11 IST
ಕೆ.ಸಿ.ಮಂಜುನಾಥ್
ಕೆ.ಸಿ.ಮಂಜುನಾಥ್   

ದೇವನಹಳ್ಳಿ: ‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿ.ಬಿ.ಐಯು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ರಾಜಕೀಯವಾಗಿ ಮುಗಿಸಲು ಅವರ ಮನೆಗಳ ಮೇಲೆ ದಾಳಿ ನಡೆಸುವ ಮೂಲಕ ಪದೆ ಪದೇ ಸಂಚು ರೂಪಿಸುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಆರೋಪಿಸಿದರು.

ಇಲ್ಲಿನ ಕನ್ನಮಂಗಲ ಗ್ರಾಮದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಯಾವುದೇ ವಿರೋಧ ಪಕ್ಷದ ನಾಯಕರ ಮನೆಗಳ ಮೇಲೆ ಸಿ.ಬಿ.ಐ ದಾಳಿ ನಡೆಸದಿದ್ದರೂ ವಿರೋಧ ಪಕ್ಷಗಳು ಕಾಂಗ್ರೆಸ್ ಬ್ಯುರೋ ಆಫ್ ಇನ್‍ವೆಸ್ಟಿಗೇಷನ್ ಎಂದು ವ್ಯಂಗ್ಯ ಮಾಡುತ್ತಿದ್ದವು. ಪ್ರಸ್ತುತ ಬಿಜೆಪಿ ಮಾಡುತ್ತಿರುವುದು ಕಮ್ಯುನಲ್ ಬ್ಯುರೋ ಆಫ್ ಇನ್ ವೆಸ್ಟೀಗೇಷನ್ ಎಂದು ಕರೆಯಬಹುದೇ’ ಎಂದು ಕಿಡಿ ಕಾರಿದರು.

‘ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡು ನಂತರ ನಡೆದ ಉಪ ಚುನಾಣೆ ಸಂದರ್ಭದಲ್ಲಿಯೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮತ್ತೆ ಎರಡು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಸಿ.ಬಿ.ಐ ಅಧಿಕಾರಿಗಳು ದಾಳಿ ನಡೆಸಿರುವುದು ರಾಜಕೀಯ ಪಿತೂರಿ. ಜೊತೆಗೆ ಉಪಚುನಾವಣೆಯಲ್ಲಿ ಸೋಲಿನ ಭಯದಿಂದ’ ಎಂದು ದೂರಿದರು.

ADVERTISEMENT

‘ನಾಲ್ಕು ಕ್ಷೇತ್ರದಲ್ಲಿ ವಿಧಾನ ಪರಿಷತ್ತಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಚುನಾವಣಾ ಪ್ರಚಾರಕ್ಕೆ ತಡೆ ನೀಡಲು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಷಡ್ಯಂತ್ರ ಹೂಡಿದೆ. ರಾಜ್ಯದ ಒಕ್ಕಲಿಗರ ಪ್ರಭಾವಿ ನಾಯಕನನ್ನು ಹಂತಹಂತವಾಗಿ ವಿವಿಧ ದಾಳಿ ಮೂಲಕ ಮಣಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಅದು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ. ಉಪಚುನಾವಣೆ ಮತ್ತು ಬರಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.