ADVERTISEMENT

ಕೊಳಾಯಿ ಸಂಪರ್ಕಕ್ಕೆ ಶುಲ್ಕ: ಸ್ಪಷ್ಟನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:21 IST
Last Updated 16 ಡಿಸೆಂಬರ್ 2019, 13:21 IST
ವಿಜಯಪುರದ ಬಿಜೆಪಿ ಮುಖಂಡ ಕುಡಿಯುವ ನೀರಿನ ವಿಚಾರವಾಗಿ ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು
ವಿಜಯಪುರದ ಬಿಜೆಪಿ ಮುಖಂಡ ಕುಡಿಯುವ ನೀರಿನ ವಿಚಾರವಾಗಿ ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು   

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಡಿಸಿರುವ ಆದೇಶದಂತೆ ಪುರಸಭೆಯ ವ್ಯಾಪ್ತಿಯಲ್ಲಿ ನೀರಿನ ಕೊಳಾಯಿ ಸಂಪರ್ಕಕ್ಕೆ 5 ಸಾವಿರ ಕಟ್ಟಿಸಿಕೊಳ್ಳುತ್ತಿದ್ದಾರೆ ಎನ್ನುವ ಆಪಾದನೆಗಳು ಪಟ್ಟಣದ ಜನತೆಯಲ್ಲಿ ಹರಿದಾಡುತ್ತಿವೆ. ಈ ಕುರಿತು ಜನರಿಗೆ ಸ್ಪಷ್ಟನೆನೀಡಬೇಕು ಎಂದು ಬಿಜೆಪಿ ಮುಖಂಡರು ಪುರಸಭಾ ಮುಖ್ಯಾಧಿಕಾರಿಗೆ ಒತ್ತಾಯಿಸಿದರು.

ಇಲ್ಲಿನ ಪುರಸಭಾ ಕಾರ್ಯಾಲಯದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ವಿಜಯಬಾಬು ಮಾತನಾಡಿ, ‘ಪುರಸಭೆಯಿಂದ ಕೊಳಾಯಿ ಸಂಪರ್ಕಕ್ಕೆ 5 ಸಾವಿರ ನಿಗದಿಪಡಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ವಾರ್ಡುಗಳಿಗೆ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನೆ ನೆಪ ಮಾಡಿಕೊಂಡಿರುವ ಕೆಲವು ಮುಖಂಡರು, ಎಲ್ಲಾ ವಾರ್ಡ್‌ಗಳಲ್ಲಿನ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜನರಿಗೆ ಕುಡಿಯುವ ಪೂರೈಕೆಗೂ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ’ ಎಂದರು.

ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ‘ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಪುರಸಭೆಯಿಂದ ತೆಗೆದುಕೊಳ್ಳುವ ತೀರ್ಮಾನಗಳಿಗೆ ಜನರಲ್ಲಿ ಸರ್ಕಾರದ ಮೇಲೆ ಅವಿಶ್ವಾಸ ಮೂಡಿಸುತ್ತಿರುವುದು ಸರಿಯಲ್ಲ. ಕೆಲವು ವಾರ್ಡ್‌ಗಳಲ್ಲಿ ನೀರು ಸರಬರಾಜಾಗುತ್ತಿಲ್ಲ. ಕೊಳಾಯಿಗಳಿದ್ದರೂ ನೀರು ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದೊಂದು ಕೊಳಾಯಿ ಸಂಪರ್ಕಕ್ಕೆ ₹ 5 ಸಾವಿರ ನಿಗದಿಪಡಿಸಿದರೆ ಕಷ್ಟವಾಗುತ್ತದೆ. ಆದ್ದರಿಂದ ಮುಂಗಡ ಹಣದಲ್ಲಿ ಕಡಿಮೆ ಮಾಡಿಕೊಡಬೇಕು’ ಎಂದರು.

ADVERTISEMENT

ಮುಖಂಡ ಡಿ.ಎಂ.ಮುನೀಂದ್ರ ಮಾತನಾಡಿ, ‘ಹಿಂದೆ ಪುರಸಭೆಗೆ ಜನಪ್ರತಿನಿಧಿಗಳಾಗಿ ಬಂದಿರುವವರು ಮಾಡಿರುವ ತಪ್ಪುಗಳಿಗೆ ಪಕ್ಷವನ್ನು ಹೊಣೆ ಮಾಡಲಾಗುತ್ತಿದೆ. ಇದು ಯಾವ ನ್ಯಾಯ? ನಮ್ಮ ಪಕ್ಷದ ಒಬ್ಬ ಸದಸ್ಯನೂ ಪುರಸಭೆಗೆ ಆಯ್ಕೆಯಾಗಿ ಬಂದಿಲ್ಲ. ಆದರೂ ಪಕ್ಷವನ್ನು ಬೊಟ್ಟು ಮಾಡಲಾಗುತ್ತಿದೆ. ಈ ಗೊಂದಲ ಪರಿಹರಿಸಿ’ ಎಂದು ಮನವಿ ಮಾಡಿದರು.

ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಮಾತನಾಡಿ, ‘ಪಟ್ಟಣದ 23 ವಾರ್ಡುಗಳೂ ನನಗೆ ಒಂದೇ ವಾರ್ಡಿನಂತೆ ಎಲ್ಲಾ ವಾರ್ಡುಗಳಿಗೂ ಸಮಾನವಾಗಿ ನೀರು ಕೊಡಬೇಕು ಎನ್ನುವ ಉದ್ದೇಶದಿಂದ ನೀರಿನ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದೇವೆ. 2003 ರಲ್ಲಿ ಸರ್ಕಾರ ಮಾಡಿರುವ ಆದೇಶದಂತೆ ಅನಧಿಕೃತವಾಗಿ ಸಂಪರ್ಕ ಪಡೆದುಕೊಂಡಿರುವವರು ಮಾತ್ರವೇ ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಿಕೊಳ್ಳಲು ₹ 5 ಸಾವಿರ ಕಟ್ಟಬೇಕು. ಈಗ ಹೊಸದಾಗಿ ಸಂಪರ್ಕ ಪಡೆದುಕೊಳ್ಳಲೂ ಹಣ ಕಟ್ಟಬೇಕು. ತಿಂಗಳಿಗೆ ₹ 80ರಂತೆ ನೀರಿನ ತೆರಿಗೆ ಕಟ್ಟಬೇಕು. ಇದು ಈಗಿನ ಸರ್ಕಾರದ ಆದೇಶವಲ್ಲ. ನಾವು ಯಾವುದೇ ಪಕ್ಷ, ವ್ಯಕ್ತಿಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿಲ್ಲ. ಇಲ್ಲಿರುವಷ್ಟು ದಿನಗಳ ಕಾಲ ಸರ್ಕಾರ ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಅದರಲ್ಲಿ ತಾರತಮ್ಯ ಮಾಡುವ ಪ್ರಶ್ನೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.