ADVERTISEMENT

ಎಂಟಿಬಿ ತ್ಯಾಗದಿಂದ ಬಿಜೆಪಿ ಸರ್ಕಾರ: ಉಪ ಮುಖ್ಯಮಂತ್ರಿ ಕಾರಜೋಳ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:41 IST
Last Updated 1 ಡಿಸೆಂಬರ್ 2019, 13:41 IST
ಸೂಲಿಬೆಲೆ ಅಂಬೇಡ್ಕರ್ ಕಾಲೋನಿಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಮತ ಪ್ರಚಾರ ಮಾಡಿದರು
ಸೂಲಿಬೆಲೆ ಅಂಬೇಡ್ಕರ್ ಕಾಲೋನಿಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಮತ ಪ್ರಚಾರ ಮಾಡಿದರು   

ಸೂಲಿಬೆಲೆ: ‘ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರದ ದುರಾಡಳಿತವನ್ನು ಪತನಗೊಳಿಸಿ ನಮಗೆ ಬೆಂಬಲ ನೀಡಿದ ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ್ ಮತ್ತು ಅವರ ಸ್ನೇಹಿತರ ತ್ಯಾಗದಿಂದ, ಬಿಜೆಪಿ ಸರ್ಕಾರ ರಚನೆಯಾಗಿ ನಾವು ಮಂತ್ರಿಗಳಾದೆವು. ಇವರನ್ನು ಗೆಲ್ಲಿಸುವ ಮೂಲಕ ಸರ್ಕಾರವನ್ನು ಉಳಿಸಬೇಕು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತದಾರರಲ್ಲಿ ಮನವಿ ಮಾಡಿದರು.

ಸೂಲಿಬೆಲೆ ಅಂಬೇಡ್ಕರ್ ಕಾಲೋನಿಯ ಮದಗಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಪ್ರಚಾರ ಮಾಡಿ ಮತಯಾಚನೆ ಮಾಡಿದರು.

‘60 ವರ್ಷಗಳ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ದೀನ ದಲಿತರ ಉದ್ಧಾರ ಆಗಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ ಅವಧಿಯಲ್ಲಿ ದಲಿತರ ಉದ್ಧಾರಕ್ಕೆ ಹೆಚ್ಚಿನ ಕ್ರಮ ತೆಗೆದುಕೊಂಡಿದ್ದಾರೆ. ಹೊಗೆ ಮುಕ್ತ ಯೋಜನೆ ಅಡಿಯಲ್ಲಿ ಸುಮಾರು 8 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 4 ಕೋಟಿ ಕುಟುಂಬಗಳಿಗೆ ನೀಡಲು ಅಂದಾಜು ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಬೆನ್ನೆಲುಬಾಗಿ’ ನಿಂತಿದ್ದಾರೆ ಎಂದರು.

ADVERTISEMENT

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕಾದರೆ. ಬಿಜೆಪಿಯ 15 ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹೊಸಕೋಟೆಯಲ್ಲಿ ಕಮಲ ಅರಳಬೇಕು’ ಎಂದರು.

ಸಚಿವ ನಾಗೇಶ್, ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮರವೆ ಕೃಷ್ಣಪ್ಪ, ಸುರೇಂದ್ರಗೌಡ, ಮುನಿಕದಿರಪ್ಪ, ರಾಘವೇಂದ್ರ ನಾಯಕ್ ಹಾಗೂ ಇತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.