ADVERTISEMENT

ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ

ಕನ್ನಡ ಮಹಾ ಕಾವ್ಯ ಪರಂಪರೆ ಹಾಗೂ ಹರಿಶ್ಚಂದ್ರ ಕಾವ್ಯ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 15:08 IST
Last Updated 6 ನವೆಂಬರ್ 2019, 15:08 IST
ಆನೇಕಲ್‌ನ ಡಾ.ಎಸ್.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಮಹಾ ಕಾವ್ಯ ಪರಂಪರೆ ಹಾಗೂ ಹರಿಶ್ಚಂದ್ರ ಕಾವ್ಯ ಉಪನ್ಯಾಸ ಕಾರ್ಯಕ್ರಮವನ್ನು ಸಾಹಿತಿ ಶೂದ್ರ ಶ್ರೀನಿವಾಸ್ ಉದ್ಘಾಟಿಸಿದರು
ಆನೇಕಲ್‌ನ ಡಾ.ಎಸ್.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಮಹಾ ಕಾವ್ಯ ಪರಂಪರೆ ಹಾಗೂ ಹರಿಶ್ಚಂದ್ರ ಕಾವ್ಯ ಉಪನ್ಯಾಸ ಕಾರ್ಯಕ್ರಮವನ್ನು ಸಾಹಿತಿ ಶೂದ್ರ ಶ್ರೀನಿವಾಸ್ ಉದ್ಘಾಟಿಸಿದರು   

ಆನೇಕಲ್ : ಸಾಹಿತ್ಯ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಕಥೆ, ಕಾದಂಬರಿ, ನಾಟಕ, ಕಾವ್ಯಗಳನ್ನು ಓದುವ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಪ್ರಯತ್ನಗಳಾಗಬೇಕು ಎಂದು ಸಾಹಿತಿ ಶೂದ್ರ ಶ್ರೀನಿವಾಸ್‌ ನುಡಿದರು.

ಅವರು ಪಟ್ಟಣದ ಡಾ.ಎಸ್‌.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಅನಿಕೇತನ ಸಾಹಿತ್ಯಿಕ ಚಿಂತನಾ ವೇದಿಕೆಯ ವತಿಯಿಂದ ಆಯೋಜಿಸಿದ್ದ ಕನ್ನಡ ಮಹಾ ಕಾವ್ಯ ಪರಂಪರೆ ಹಾಗೂ ಹರಿಶ್ಚಂದ್ರ ಕಾವ್ಯ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ನಮ್ಮ ಪರಂಪರೆಗಳ ಬಗ್ಗೆ ಅರಿವಾಗುವುದರ ಜೊತೆಗೆ ಜ್ಞಾನದ ಕಣಜ ತುಂಬುತ್ತದೆ. ಯಾವುದೇ ವಿಚಾರದ ಬಗ್ಗೆ ಮಾತನಾಡುವ ವಿಮರ್ಶಿಸುವ ಶಕ್ತಿ ಬರುತ್ತದೆ ಎಂದರು.

ADVERTISEMENT

ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಪದ್ಮಿನಿ ನಾಗರಾಜು ಮಾತನಾಡಿ, ಅಕಾಡೆಮಿಯು 22 ಭಾಷೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಳಕೆಯಾಗದೇ ಹಲವಾರು ಭಾಷೆಗಳು ನಶಿಸಿ ಹೋಗುತ್ತಿವೆ. ಭಾಷೆ ಬಳಕೆಯಾದಷ್ಟು ಬೆಳವಣಿಗೆಯಾಗುತ್ತದೆ. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಕನ್ನಡ ಕಾವ್ಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಕವಿ ಎಲ್‌.ಎನ್‌.ಮುಕುಂದರಾಜ್‌, ಹರಿಶ್ಚಂದ್ರ ಕಾವ್ಯದ ಬಗ್ಗೆ ಮಾತನಾಡಿ, ಹರಿಶ್ಚಂದ್ರ ಕಾವ್ಯ ಸತ್ಯ, ಪ್ರಾಮಾಣಿಕತೆಗಾಗಿ ನೂರಾರು ವರ್ಷಗಳಿಂದ ಸಾಕ್ಷಿಯಾಗಿರುವ ಕಾವ್ಯವಾಗಿದೆ. ರಾಘವಾಂಕ ಹರಿಶ್ಚಂದ್ರ ಕಾವ್ಯದ ಮೂಲಕ ಜನರಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರಮಿಸಿದ್ದಾನೆ. ಅಂದಿನ ಕಾಲದಿಂದಲೂ ಜಾತೀಯತೆಯಿತ್ತು. ಇದನ್ನು ಹೋಗಲಾಡಿಸಲು ರಾಘವಾಂಕ ತನ್ನ ಕಾವ್ಯದಲ್ಲಿ ಪ್ರಯತ್ನ ಮಾಡಿದ್ದಾನೆ ಎಂದರು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಸತ್ಯ, ಪ್ರಾಮಾಣಿಕತೆಯನ್ನು ಎತ್ತಿ ಹಿಡಿದಿರುವ ಹರಿಶ್ಚಂದ್ರ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ. ಜನರಲ್ಲಿ ಮಾನವೀಯತೆ, ಮೌಲ್ಯಗಳನ್ನು ಬೆಳೆಯಲು ಕಾವ್ಯ, ಕಾದಂಬರಿ, ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಧ್ಯಾಪಕಿ ಧನಲಕ್ಷ್ಮೀ, ಮುಖಂಡರಾದ ಆದೂರು ಪ್ರಕಾಶ್‌, ಭೈರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.