ADVERTISEMENT

ಬರ್ಲಿನ್‌ನಲ್ಲಿ ಪುಸ್ತಕಗಳೇ ಸಂಗಾತಿ

ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆ ನಿವಾಸಿ ಸುಪ್ರೀತ್‌

ನಟರಾಜ ನಾಗಸಂದ್ರ
Published 5 ಏಪ್ರಿಲ್ 2020, 6:52 IST
Last Updated 5 ಏಪ್ರಿಲ್ 2020, 6:52 IST
ಬರ್ಲಿನ್‌ ನಗರದಲ್ಲಿ ಲಾಕ್‌ಡೌನ್‌ ನಡುವೆಯೂ ಬಸ್‌ ಸಂಚಾರ 
ಬರ್ಲಿನ್‌ ನಗರದಲ್ಲಿ ಲಾಕ್‌ಡೌನ್‌ ನಡುವೆಯೂ ಬಸ್‌ ಸಂಚಾರ    

ದೊಡ್ಡಬಳ್ಳಾಪುರ: ಇಲ್ಲಿನ ಸೋಮೇಶ್ವರ ಬಡಾವಣೆ ನಿವಾಸಿ ಸುಪ್ರೀತ್‌ ಜರ್ಮನಿಯಬರ್ಲಿನ್‌ ನಗರದ ಐಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತಿದ್ದಾರೆ. ಅಲ್ಲಿಯೂ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಬಹುತೇಕ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ (ವರ್ಕ್‌ ಫ್ರಂ ಹೋಂ). ಮನೆಯಲ್ಲಿಯೇ ಕೆಲಸ ಮಾಡುತ್ತಿರುವ ಸುಪ್ರೀತ್‌ ಅಲ್ಲಿನ ಸ್ಥಿತಿ ಗತಿಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಮಾರ್ಚ್ 2ರಂದು ಬೆಳಿಗ್ಗೆ ಗಡಿಬಿಡಿಯಲ್ಲಿ ಕಚೇರಿಗೆ ಹೊರಟಿದ್ದಾಗ ಸಹೋದ್ಯೋಗಿಯೊಬ್ಬರು ಕರೆ ಮಾಡಿ,‘ಆಫೀಸ್‌ಗೆ ಹೋಗಬೇಡ, ಬರ್ಲಿನ್‌ಲ್ಲಿ ಒಬ್ಬರಿಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನೀನು ಬೇಗನೆ ಮನೆಗೆ ಹೊರಡು’ ಎಂದರು. ಯಾವುದೇ ಅಪರೂಪದ ಪ್ರಾಣಿಯೊಂದು ನಗರಕ್ಕೆ ನುಗ್ಗಿ ದಾಳಿ ನಡೆಸುತ್ತಿರುವಂತೆ ಹೇಳಿದ ಮಾತುಗಳನ್ನು ಕೇಳಿ ವಾಟ್ಸ್‌ಆ್ಯಪ್‌ ತೆಗೆದು ನೋಡಿದರೆ ಕಂಪನಿಯ ಸಿಇಒ ಗ್ರೂಪ್‌ನಲ್ಲಿ ಎಲ್ಲರಿಗೂ ದ್ವನಿ ಸಂದೇಶ ಕಳುಹಿಸಿದ್ದರು. ‘ಮುಂದಿನ ಸೂಚನೆ ನೀಡುವವರೆಗೂ ಎಲ್ಲರು ಮನೆಯಿಂದಲೇ ಕೆಲಸ ನಿರ್ವಹಿಸಬೇಕು’ ಎಂದು. ಕಚೇರಿಯಿಂದ ಹಿಂದಿರುವಾಗಲೇ ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬಂದೆ. ಅಂದಿನಿಂದ ಆರಂಭವಾದ ವರ್ಕ್‌ ಫ್ರಂ ಹೋಂ ಇಂದಿಗೂ ಮುಂದುವರಿದೇ ಇದೆ’ ಎಂದರು.

ಜೀವನೋಪಾಯಕ್ಕೆ ಅಲ್ಪಕಾಲೀನ ಉದ್ಯೋಗ:‘ಜರ್ಮನಿ ಹಾಗೂ ಸ್ವಿಟ್ಜರ್ಲೆಂಡ್‌ ದೇಶಗಳು ತಮ್ಮ ಉದ್ಯೋಗಿಗಳಿಗೆ ಜೀವನೋಪಾಯಕ್ಕೆ ಅಲ್ಪಕಾಲೀನ ಉದ್ಯೋಗ (Kurzarbeit) ಅನ್ನು ಒದಗಿಸಿದೆ. ಯಾವ ಕಂಪನಿಯ ಉದ್ಯೋಗಿಗಳಿಗೆ ವೇತನ ಕೊಡಲು ಇಂತಹ ಸಮಯದಲ್ಲಿ ಆಗುದಿಲ್ಲವೊ ಆ ಕಂಪನಿ ಅರ್ಜಿದಾರರಿಗೆ ಉದ್ಯೋಗಿಗಳ ಮೂಲ ವೇತನದಲ್ಲಿ ಶೇ. 60ರಷ್ಟು ಪ್ರತಿ ತಿಂಗಳು ನೀಡಲಾಗುತ್ತದೆ. ಈ ಸೌಲಭ್ಯವನ್ನು ವರ್ಷದ ಕೊನೆಯವರೆಗೂ ಸರ್ಕಾರವೇ ಕೊಡುತ್ತದೆ. ಈ ಹಣ ಮನೆ ಬಾಡಿಗೆ, ದಿನಸಿ ಸಾಮಗ್ರಿಗಳು ಮತ್ತಿತರೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸರಿಯಾಗಲಿದೆ. ಈ ಸಮಯದಲ್ಲಿ ಉದ್ಯೋಗಿಗಳು ಕೆಲಸ ಮಾಡುವಂತಿಲ್ಲ. ಈ ಹಣವೆಲ್ಲವು ಜನರು ಪಾವತಿಸುವ ತೆರಿಗೆ ಹಣದಿಂದಲೇ ಕೊಡಲಾಗುತದೆ. ನಮ್ಮ ದೇಶದಲ್ಲೂ ಪ್ರಾಮಾಣಿಕ ತೆರಿಗೆ ಪಾವತಿ ಮಾಡೋಣ. ಹಾಗೆಯೇ ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರವು ಪ್ರಾಮಾಣಿಕವಾಗಿ ಉದ್ಯೋಗ ಪಾವತಿಸುವಂತಾಗಲಿ ಎನ್ನುವ ಆಸೆ ಇಲ್ಲಿನ ವ್ಯವಸ್ಥೆಯನ್ನು ನೋಡಿದಾಗ ಅನ್ನಿಸುತ್ತಿದೆ ಎಂದು ಹೇಳಿದರು.

ADVERTISEMENT

ಬಸ್‌– ಮೆಟ್ರೊ ಸೇವೆ ಲಭ್ಯ:‘ಬರ್ಲಿನ್‌ ನಗರಕ್ಕೆ ಲಾಕ್‌ಡೌನ್‌ ವಿಧಿಸಲಾಗಿದೆ. ಆದರೆ ಬಸ್‌, ಮೆಟ್ರೊ ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತಲೇ ಇವೆ. ಸೂಪರ್‌ ಮಾರ್ಕೆಟ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳ ಖರೀದಿ ನಡೆಯುತ್ತಿದೆ. ಬೆಳಗಿನ ವಾಯು ವಿಹಾರಕ್ಕೆ ಹೋಗುವವರು ಕನಿಷ್ಟ ಒಂದೂವರೆ ಮೀಟರ್‌ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ರಸ್ತೆಯಲ್ಲಿ ಹಿಂದಿನಂತೆ ಜನ ಸಂಚಾರ ಇಲ್ಲ’ ಎಂದು ಸುಪ್ರೀತ್‌ ವಿವರಿಸಿದರು.

ವೈರಸ್‌ ಬಗ್ಗೆ ಇಲ್ಲ ಭಯ:‘ಇಲ್ಲಿನ ಆಡಳಿತ ವ್ಯವಸ್ಥೆಯನ್ನು ನೋಡುತ್ತಿದ್ದರೆ ಎಲ್ಲರನ್ನು ನೋಡಿಕೊಳ್ಳುವ ಸಾಮರ್ಥ್ಯ ಇದೆ ಎನ್ನಿಸುತ್ತದೆ. ಎಲ್ಲಾ ರೀತಿಯ ಆರೋಗ್ಯ ವಿಮೆ ಇವೆ. ಅಲ್ಲದೆ ಕೊರಾನಾ ವೈರಸ್‌ ಮಾರಣಾಂತಿಕ ಅಲ್ಲ ಎಂದು ತಿಳಿದು ಬಂದಿರೊ ಕಾರಣವೋ ಏನೋ, ಇಲ್ಲಿನ ಜನ ವೈರಸ್‌ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಭಯ ಬಿದ್ದಿಲ್ಲ. ಇದು ಇಲ್ಲಿನ ಜನರ ಕೆಲಸಗಳನ್ನು ನೋಡಿದರೆ ತಿಳಿಯುತ್ತದೆ’ ಎಂದು ಸುಪ್ರೀತ್‌ ಶ್ಲಾಘಿಸಿದರು.

‘ಅಗತ್ಯ ಸೇವೆಗಳು ಎಂದಿನಂತಲೇ ಕಾರ್ಯಾಚರಿಸುತ್ತಿವೆ’:‘ಜರ್ಮನಿಯಲ್ಲಿ ಪ್ರಥಮ ಬಾರಿಗೆ ಕೊರಾನಾ ವೈರಸ್‌ ವ್ಯಕ್ತಿಯೊಬ್ಬರಿಗೆ ಇರುವುದು ದೃಢಪಟ್ಟಿದ್ದು ಜನವರಿ 27 ರಂದು. ಇಲ್ಲಿನ ರಾಬರ್ಟ್ಕೊಕ್ ಇನ್ಸ್‌ಟ್ಯೂಟ್‌ ಪ್ರಕಾರ ಮಾರ್ಚ್ 3ಕ್ಕೆ ಸುಮಾರು 79,696 ಜನ ಕೊರಾನಾ ಸೋಂಕಿತರು ಇದ್ದರು. ಇವರ ಪೈಕಿ 1,017 ಮೃತಪಟ್ಟಿದ್ದಾರೆ. ನಿತ್ಯದ ಸಾಮಗ್ರಿಗಳು, ಸಾರ್ವಜನಿಕ ಸಾರಿಗೆ, ಔಷಧಾಲಯಗಳು ಹಾಗೂ ಅಗತ್ಯ ಸೇವಾ ಕ್ಷೇತ್ರಗಳು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಲೇ ಇವೆ. ಶೇ. 80 ಜನರು ಹೊರಗಿನ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಗೃಹ ಬಂಧನದ ದಿನಚರಿ: ಕಚೇರಿ ಕೆಲಸದ ನಡುವೆ ಮನೆಯ ಒಂದಿಷ್ಟು ಕೆಲಸಗಳನ್ನು ಮಾಡಿಕೊಳ್ಳುತ್ತ ಪುಸ್ತಕಗಳನ್ನು ಓದುತ್ತ, ದೂರದೂರಿನ ಕುಟುಂಬದವರೊಂದಿಗೆ ಒಂದಿಷ್ಟು ಮಾತುಕತೆಯಲ್ಲಿ ಕಾಲ ಕಳೆಯುತ್ತೇನೆ. ನಮ್ಮೂರಿಗೆ ಹೋಗಬೇಕು ಎನ್ನುವ ಆಸೆ ಒಂದು ಕಡೆಯಾದರೆ, ಮತ್ತೊಂದು ಕಡೆ ಇಲ್ಲಿಂದ ಸಾಹಸ ಪಟ್ಟುಕೊಂಡು ಹೋಗಿ ನಾನು ಸೋಂಕು ಹತ್ತಿಸಿಕೊಂಡು ಅಲ್ಲಿನವರಿಗೂ ಏಕೆ ಕೊರಾನಾ ಸೋಂಕು ಹರಡಬೇಕು. ಗೃಹ ಬಂಧನದಲ್ಲಿ ಕಾಲ ಕಳೆಯಲು ಮಾನಸಿಕ ನೆಮ್ಮದಿಗೆ ಒಂದಿಷ್ಟು ಪುಸ್ತಕಗಳು ಸಂಗಾತಿಗಳಾಗಿವೆ ಎಂದು ಅವರು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.