ADVERTISEMENT

ಮಾನವೀಯ ನೆಲೆಯ ಬದುಕು ಕಟ್ಟಿಕೊಳ್ಳಿ: ಶಾಸಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 13:19 IST
Last Updated 12 ಆಗಸ್ಟ್ 2019, 13:19 IST
ವಿಜಯಪುರದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಡಂ ಶಾಲೆಯಲ್ಲಿ ಆಯೋಜಿಸಿದ್ದ ಬಕ್ರೀದ್ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿದರು
ವಿಜಯಪುರದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಡಂ ಶಾಲೆಯಲ್ಲಿ ಆಯೋಜಿಸಿದ್ದ ಬಕ್ರೀದ್ ಕಾರ್ಯಕ್ರಮದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿದರು   

ವಿಜಯಪುರ: ದೇಶದ ಪ್ರತಿಯೊಬ್ಬರು ಜಾತಿ, ಧರ್ಮ, ಮತಗಳನ್ನು ಹೊರಗಿಟ್ಟು ಮಾನವೀಯತೆಯ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳುವತ್ತ ಚಿಂತಿಸಬೇಕಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಡಂ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬಕ್ರೀದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಹಬ್ಬಗಳ ಆಚರಣೆಗಳಿಂದ ಪರಸ್ಪರ ಶುಭಾಶಯಗಳನ್ನು ಕೋರುವುದರಿಂದ ದೇಶದ ಏಳಿಗೆ ಸಾಧ್ಯವಾಗುವುದಿಲ್ಲ. ಪರಸ್ಪರ ಒಬ್ಬರಿಗೊಬ್ಬರು ಸಹಕಾರ ಮನೋಭಾವನೆಯಿಂದ ಪರೋಪಕಾರ ಮಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು. ಇದರಿಂದ ಮಾತ್ರ ದೇಶದ ಪ್ರಗತಿ, ಸಮುದಾಯಗಳ ನಡುವೆ ಸಾಮರಸ್ಯ ಉಂಟಾಗಲು ಸಾಧ್ಯ’ ಎಂದರು.

ADVERTISEMENT

ಜಾಮೀಯಾ ಮಸೀದಿ ಅಧ್ಯಕ್ಷ ಎ.ಆರ್.ಹನೀಪುಲ್ಲಾ ಮಾತನಾಡಿ, ‘ಯಾವುದೇ ಜಾತಿ, ಧರ್ಮಗಳಿರಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಈ ದೇಶದ ಕಾನೂನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು. ಅಲ್ಪಸಂಖ್ಯಾತರು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ‘ಧರ್ಮಗ್ರಂಥಗಳಲ್ಲಿ ಬೋಧಿಸಿರುವ ಎಲ್ಲ ವಿಚಾರಗಳನ್ನು ಅನುಸರಿಸಿ ನಡೆದರೆ ಮಾತ್ರವೇ ಸನ್ಮಾರ್ಗಕ್ಕೆ ಹೋಗಲು ಸಾಧ್ಯವಿದೆ. ಎಲ್ಲ ಧರ್ಮಗ್ರಂಥಗಳ ಸಾರವು ಆತ್ಮಶುದ್ಧಿಯಾಗಿರುವ ಕಾರಣದಿಂದ ನಾವೆಲ್ಲರೂ ಭಗವಂತನ ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಮುಖಂಡರಾದ ಬಿಜ್ಜವಾರ ಆನಂದ್, ಸಾಧತ್, ಶುಯೇಬ್‌ಪಾಷ, ನಿಜಾಂಪಾಷ, ಅಪ್ಜಲ್‌ಪಾಷ, ಭುಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.