ADVERTISEMENT

ಹೆಜ್ಜೇನು: ತಂಟೆಗೆ ಹೋದರೆ ದಾಳಿ ಖಚಿತ

ಹಳೆ ತಾಲ್ಲೂಕು ಕಚೇರಿ, ಪ್ರವಾಸಿ ಮಂದಿರ ಸುತ್ತ‌ಮುತ್ತ ಗೂಡುಕಟ್ಟಿರುವ ಹೆಜ್ಜೇನು

ವಡ್ಡನಹಳ್ಳಿ ಬೊಜ್ಯನಾಯ್ಕ
Published 20 ಡಿಸೆಂಬರ್ 2018, 19:39 IST
Last Updated 20 ಡಿಸೆಂಬರ್ 2018, 19:39 IST
ಹಳೆ ತಾಲ್ಲೂಕು ಕಚೇರಿ ಬಳಿ ಮರದಲ್ಲಿರುವ ಜೇನುಗೂಡು
ಹಳೆ ತಾಲ್ಲೂಕು ಕಚೇರಿ ಬಳಿ ಮರದಲ್ಲಿರುವ ಜೇನುಗೂಡು   

ದೇವನಹಳ್ಳಿ: ಹಳೆ ತಾಲ್ಲೂಕು ಕಚೇರಿ ಮತ್ತು ಪ್ರವಾಸಿ ಮಂದಿರ ಸುತ್ತ‌ಮುತ್ತ ಹೆಜ್ಜೇನು ಗೂಡು ಕಟ್ಟಿದೆ. ಒಂದೇ ಮರದ ವಿವಿಧ ಕೊಂಬೆಗಳಲ್ಲಿ ನಾಲ್ಕರಿಂದ ಐದಾರು ಗೂಡುಗಳಿವೆ. ಆಂಜನೇಯಸ್ವಾಮಿ ಪ್ರತಿಮೆ ಬಳಿಯೂ ಐದಾರು ಗೂಡುಗಳಿವೆ. ಪ್ರವಾಸಿ ಮಂದಿರದ ಒಳ ಭಾಗದಲ್ಲಿ ಬೆಳೆದಿರುವ ಮರಗಳಲ್ಲಿಯೂ ಗೂಡುಗಳಿವೆ. ಅಪಾಯಕಾರಿ ಜಾಗಗಳಲ್ಲಿ ಗೂಡು ಕಟ್ಟಿರುವುದರಿಂದ ಯಾವುದೇ ಕ್ಷಣದಲ್ಲಿ ತೊಂದರೆ ಎದುರಾಗಲಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ಹಳೆ ತಾಲ್ಲೂಕು ಕಚೇರಿಯಲ್ಲಿ ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಕಚೇರಿ ಕಟ್ಟಡ ಎದುರಿಗಿರುವ ಮರವೊಂದರಲ್ಲಿ 82ಕ್ಕೂ ಹೆಚ್ಚು ಹೆಜ್ಜೇನು ಗೂಡುಗಳಿವೆ. ಮರದ ಕೆಳಗೆ ಖಾಸಗಿ ಪದವಿ ಪೂರ್ವ ಕಾಲೇಜು ಇದ್ದು ಅದರಲ್ಲಿ 70ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಪಕ್ಕದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ತಾಲ್ಲೂಕು ಪಂಚಾಯಿತಿ ಆಡಳಿತ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಮೂಲ್ ಒಕ್ಕೂಟ ಉಪ ಶಿಬಿರ ಕಚೇರಿ, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ, ಸಮಾಜ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸುತ್ತಿವೆ. ಮರದ ಬಲಭಾಗದಲ್ಲಿ ಕಂದಾಯ ಇಲಾಖೆ ವಸತಿ ಗೃಹ, ಲೋಕೋಪಯೋಗಿ ಇಲಾಖೆ, ಅದಕ್ಕೆ ಹೊಂದಿಕೊಂಡಂತೆ ತಾಲ್ಲೂಕು ಆಡಳಿತ ಕಚೇರಿ, ನೋಂದಣಿ ಇಲಾಖೆ, ರೇಷ್ಮೆ ಇಲಾಖೆ ಇದೆ. ಆಕಸ್ಮಿಕವಾಗಿ ಒಂದು ಗೂಡಿಗೆ ಯಡವಟ್ಟು ಮಾಡಿದರೆ ಇಡೀ ಮರದಲ್ಲಿರುವ ಎಲ್ಲಾ ಗೂಡಿನ ಜೇನುಹುಳು ಸಾಮೂಹಿಕವಾಗಿ ದಾಳಿ ಮಾಡುವ ಸಾಧ್ಯ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಿ.ವೆಂಕಟೇಶ್.

2014ರಲ್ಲಿ ನಡೆದ ಘಟನೆ: ಸಂತೆ ಮೈದಾನದಲ್ಲಿ ಆಕಸ್ಮಿಕ ದಾಳಿ ನಡೆಸಿದ ಹೆಜ್ಜೇನುಗಳ ಕಡಿತದಿಂದ ಒಬ್ಬರು ಸಾವನ್ನಪ್ಪಿದ್ದರು. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು 2016ರಲ್ಲಿ ಇದೇ ಸಂತೆ ಮೈದಾನದಲ್ಲಿ ಇಬ್ಬರು ಮಹಿಳೆಯರ ಮೇಲೆ ಹೆಜ್ಜೇನು ದಾಳಿ ನಡೆದಿತ್ತು. ಕಳೆದ ತಿಂಗಳು ನೂತನ ಜಿಲ್ಲಾಡಳಿತ ಭವನದಲ್ಲಿ ಹೆಜ್ಜೇನು ದಾಳಿಗೆ 21ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅದರೂ, ಸಂಬಂಧಿಸಿದ ಇಲಾಖೆ ಯಾವುದೇ ರೀತಿಯಿಂದ ಕ್ರಮ ಕೈಗೊಂಡಿರಲಿಲ್ಲ ಎನ್ನುತ್ತಾರೆ ಸ್ಥಳೀಯರಾದ ಗೋವಿಂದ ರಾಜು, ಚಂದ್ರಶೇಖರಸ್ವಾಮಿ.

ADVERTISEMENT

ಪ್ರವಾಸಿ ಮಂದಿರದಲ್ಲಿ ಹೆಜ್ಜೇನು ಗೂಡುಗಳ ಸಂಖ್ಯೆ ಹೆಚ್ಚುತ್ತಿದೆ. ವಾರದಲ್ಲಿ ನಾಲ್ಕಾರು ಬಾರಿ ವಿವಿಧ ಪಕ್ಷ ಮತ್ತು ಇತರೆ ಸಂಘ – ಸಂಸ್ಥೆಗಳ ಸಭೆ ನಡೆಯುತ್ತದೆ. ಪಕ್ಕದಲ್ಲೇ ಸರ್ಕಾರಿ ಶಾಲೆ ಮತ್ತು ಅಂಗವಿಕಲರ ವಸತಿ ಶಾಲೆ, ಶಿಕ್ಷಣಾಧಿಕಾರಿ ಆಡಳಿತ ಕಚೇರಿ ಇದೆ. ಜೇನು ಗೂಡುಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ಎರಡು ವರ್ಷಗಳ ಹಿಂದೆ ತೆರವುಗೊಳಿಸಲಾಗಿತ್ತು. ಅಪಾಯಕಾರಿ ಎಂಬುದು ತಿಳಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶಿಘ್ರದಲ್ಲೇ ತೆರವು ಗೊಳಿಸಲಾಗುವುದು ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಎಂ.ಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.