ADVERTISEMENT

ಆರ್ಥಿಕ ಗಣತಿಗೆ ಅಡ್ಡಿ ಸಿಎಎ, ಎನ್‌ಆರ್‌ಸಿ ಹೋರಾಟ

ಸಮೀಕ್ಷಕರಿಗೆ ಮಾಹಿತಿ ನೀಡದ ಮನೆ ಮಾಲೀಕರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 19:45 IST
Last Updated 3 ಜನವರಿ 2020, 19:45 IST
ಆರ್ಥಿಕ ಗಣತಿಗಾಗಿ ರೂಪಿಸಲಾಗಿರುವ ಮೊಬೈಲ್‌ ಆಪ್‌
ಆರ್ಥಿಕ ಗಣತಿಗಾಗಿ ರೂಪಿಸಲಾಗಿರುವ ಮೊಬೈಲ್‌ ಆಪ್‌   

ದೊಡ್ಡಬಳ್ಳಾಪುರ: ಮನೆಗಳ ಬಳಿ ಹೋಗಿ ಮಾಹಿತಿ ಸಂಗ್ರಹಕ್ಕೆ ಪ್ರಶ್ನೆ ಕೇಳುತ್ತಲೇ ಮನೆ ಮಾಲೀಕರು ನಮ್ಮನ್ನು ಕೇಳುವ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸುವುದೇ ಕಷ್ಟವಾಗಿದೆ. ಸದ್ಯಕ್ಕೆ ಅವರಿಂದ ಹಲ್ಲೆಗೆ ಒಳಗಾಗದೆ ತಪ್ಪಿಸಿಕೊಂಡು ಬಂದರೆ ಸಾಕು. ಅದರಲ್ಲೂ ಮುಸ್ಲಿಂ ಕುಟುಂಬಗಳು ಹೆಚ್ಚಾಗಿ ವಾಸ ಮಾಡುವ ಪ್ರದೇಶದಲ್ಲಿ ಸಮೀಕ್ಷೆಗೆ ಹೋದರಂತೂ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಇದರಿಂದಾಗಿ 7ನೇ ರಾಷ್ಟ್ರೀಯ ಆರ್ಥಿಕ ಗಣತಿ ನಡೆಸುವುದೇ ದೊಡ್ಡ ಸವಾಲಾಗಿದೆ ಎಂದು ಸಾಮಾನ್ಯ ಸೇವಾ ಕೇಂದ್ರಗಳ (Governance Services India Limited) ಮಾಹಿತಿ ಸಂಗ್ರಹಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ದೇಶದಲ್ಲಿ ಪೌರತ್ವ ಕಾಯಿದೆ (ಸಿಎಎ),ಎನ್‌ಆರ್‌ಸಿ ಪರ-ವಿರೋಧ ಹೋರಾಟಗಳಿಂದಾಗಿ ಆತಂಕಗೊಂಡಿರುವ ಜನ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆರ್ಥಿಕ ಗಣತಿ ಸಮೀಕ್ಷೆಗಾಗಿ ಮಾಹಿತಿ ಸಂಗ್ರಹಿಸುವ ಸಲುವಾಗಿಯೇ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ. ಎಲ್ಲಾ ಮಾಹಿತಿಯನ್ನು ಕಾಗದ ರಹಿತವಾಗಿ ಆನ್‌ ಲೈನ್‌ ಮೂಲಕ ಸಂಗ್ರಹಿಸಲಾಗುತ್ತಿದೆ. ಆರ್ಥಿಕ ಗಣತಿಯಲ್ಲಿ ಮನೆ ಮಾಲೀಕರಿಂದ ಮೊದಲುಗೊಂಡು ಕುಟುಂಬದವರ ಸಂಖ್ಯೆ, ಮಕ್ಕಳ ಸಂಖ್ಯೆ, ಮನೆ ಮಾಲೀಕರ ಮೊಬೈಲ್‌ ಸಂಖ್ಯೆ, ಸ್ವಂತ ಮನೆ, ಉದ್ಯೋಗ, ಜಾತಿ, ಧರ್ಮ ಸೇರಿದಂತೆ ಇತರ ಮಾಹಿತಿ ಸಂಗ್ರಹಿಸಬೇಕು. ಎಲ್ಲಾ ಮಾಹಿತಿಯನ್ನು ಮೊಬೈಲ್‌ನಲ್ಲಿ ಸಂಗ್ರಹ ಮಾಡಿದ ನಂತರ ಮಾಹಿತಿ ನೀಡಿದವರಿಗೆ ತೋರಿಸಿಯೇ ಅಂತಿಮಗೊಳಿಸಲಾಗುತ್ತದೆ. ಈ ಗಣತಿಯು ಪ್ರತಿ ವರ್ಷವು ನಡೆಯುತ್ತ ಬಂದಿದೆ. ಈ ಬಗ್ಗೆ ಬಹುತೇಕ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲದಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಜ.9 ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿಎಸ್‌ಸಿಇ (ಸಾಮಾನ್ಯ ಸೇವಾ ಕೇಂದ್ರಗಳ) ಜಿಲ್ಲಾ ಮೇಲ್ವಿಚಾರಕ ಮಹೇಶ್‌ ತಿಳಿಸಿದ್ದಾರೆ.

2019ರ ಡಿಸೆಂಬರ್‌ 12 ರಿಂದ ನಮ್ಮ ಜಿಲ್ಲೆಯಲ್ಲಿ ಆರ್ಥಿಕ ಗಣತಿ ಆರಂಭವಾಗಿದೆ. ಮಾರ್ಚ್‌ ಅಂತ್ಯಕ್ಕೆ ಗಣತಿಯನ್ನು ಅಂತಿಮಗೊಳಿಸಬೇಕಿದೆ. ಆದರೆ ಇನ್ನು ಕೆಲವೇ ಕುಟುಂಬಗಳ ಸಮೀಕ್ಷೆಯಷ್ಟೇ ನಡೆಸಲಾಗಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಯಾವುದೇ ಗೊಂದಲ ಇಲ್ಲ. ದೊಡ್ಡಬಳ್ಳಾಪುರ ನಗರದ ಕೆಲವು ವಾರ್ಡ್‌ಗಳಲ್ಲಿ ಸೂಕ್ತ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.