ಸಾಸಲು(ದೊಡ್ಡಬಳ್ಳಾಪುರ): ಕೃಷಿ ಜಮೀನುಗಳಲ್ಲಿ ಕೊಳವೆಬಾವಿಗಳಿಗೆ ಅಳವಡಿಸಿದ್ದ ಕೇಬಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನತ್ತಿದ ರೈತರು ಕಳವಿಗೆ ಬಳಸಿದ್ದ ವಾಹನವನ್ನು ಹಿಡಿದಿದ್ದಾರೆ. ಆದರೆ ಕಳ್ಳರು ಪರಾರಿಯಾಗಿದ್ದಾರೆ.
ತಾಲ್ಲೂಕಿನ ಸಾಸಲು ಹೋಬಳಿಯ ನಾಗಲಾಪುರದಲ್ಲಿ ಶನಿವಾರ ತಡ ರಾತ್ರಿ 2 ಗಂಟೆ ಸುಮಾರಿಗೆ ಕೊಳವೆಬಾವಿಗೆ ಹಾಕಲಾಗಿದ್ದ ಕೇಬಲ್ ಕದ್ದು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಕಳ್ಳರನ್ನು ಬೆನ್ನಟ್ಟಿದ ರೈತರು ವಾಹನ ಹಿಡಿಯುಲ್ಲಿ ಯಶಸ್ವಿಯಾಗಿದ್ದಾರೆ. ರೈತರನ್ನು ಕಂಡೊಡನೆ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆ ಬಳಿಕ ಭಾನುವಾರ ಬೆಳಗ್ಗೆ ನಾಗಲಾಪುರದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಹಿಡಿದು ರೈತರು ಹಿಡಿದು ತಮ್ಮ ಕಾರಿಲ್ಲಿ ಕೂರಿಸಿದಾಗ ಮತ್ತೊಂದು ಬಾಗಿಲು ತೆರೆದು ಪರಾರಿಯಾಗಿದ್ದಾನೆ.
ವಾಹನದಲ್ಲಿ ವಿವಿಧ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಕತ್ತರಿಸಲಾಗಿದ್ದ ಕೇಬಲ್ ತುಂಡುಗಳು ಪತ್ತೆಯಾಗಿವೆ. ವಾಹನ ಯಲಹಂಕ ಆರ್‌ಟಿಒ ಕಚೇರಿಯಲ್ಲಿ ನೋಂದಣಿ ಆಗಿರುವ ದಾಖಲೆ ಪತ್ತೆಯಾಗಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಮೊಬೈಲ್ ಹಾಗೂ ವಾಹನವನ್ನು ರೈತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಸೂಲುಕುಂಟೆ, ಚನ್ನವೀರನಹಳ್ಳಿ, ಬೆನಕಿನಮಡಗು, ಕಾಡು ಆಲಪ್ಪನಹಳ್ಳಿ, ಸಾಸಲು, ಬೋವಿಪಾಳ್ಯ ಗ್ರಾಮದ ರೈತರ ಜಮೀನುಗಳ ಕೊಳವೆ ಬಾವಿಗಳಿಂದ ಕೇಬಲ್ ಕದಿಯಲಾಗಿದೆ ಎಂದು ರೈತರು ಪೊಲೀಸರಿಗೆ ದೂರು ನೀಡಿದ್ದಾರೆ.
ದೊಡ್ಡಬೆಳವಂಗಲ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.