ADVERTISEMENT

ಆನೇಕಲ್ | ಬ್ಯಾಂಕ್‌ನಲ್ಲಿ ತಮಿಳಿನಲ್ಲಿ ವ್ಯವಹಾರ: ಆಕ್ರೋಶ

ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:21 IST
Last Updated 24 ಸೆಪ್ಟೆಂಬರ್ 2025, 2:21 IST
ಆನೇಕಲ್ ತಾಲ್ಲೂಕಿನ ರಾಮಸಾಗರದ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರೊಂದಿಗೆ ಕನ್ನಡ ಮಾತನಾಡುವ ಸಂಬಂಧ ಮಾತಿನ ಚಕಮಕಿ ನಡೆಯಿತು
ಆನೇಕಲ್ ತಾಲ್ಲೂಕಿನ ರಾಮಸಾಗರದ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರೊಂದಿಗೆ ಕನ್ನಡ ಮಾತನಾಡುವ ಸಂಬಂಧ ಮಾತಿನ ಚಕಮಕಿ ನಡೆಯಿತು   

ಆನೇಕಲ್: ತಾಲ್ಲೂಕಿನ ಚಂದಾಪುರ ಸಮೀಪದ ರಾಮಸಾಗರದಲ್ಲಿ ಕನ್ನಡ ಭಾಷೆ ಮಾತನಾಡುವ ಸಂಬಂಧ ಗ್ರಾಹಕರು ಮತ್ತು ಕೆನರಾ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರೊಂದಿಗೆ ಮಂಗಳವಾರ ಮಾತಿನ ಚಕಮಕಿ ನಡೆಯಿತು. 

ಗ್ರಾಹಕರೊಂದಿಗೆ ಕೆನರಾ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರು ತಮಿಳಿನಲ್ಲಿ ಮಾತನಾಡುತ್ತಾರೆ. ತಮಿಳು ಅರ್ಥವಾಗದ ಗ್ರಾಹಕರು ಕನ್ನಡದಲ್ಲಿ ಮಾತನಾಡುವಂತೆ ಮನವಿ ಮಾಡುತ್ತಾರೆ. ಆದರೆ, ತಾವು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಶಾಖಾ ವ್ಯವಸ್ಥಾಪಕರು ಹೇಳುತ್ತಾರೆ. ಇದರಿಂದ ಕೆರಳಿದ ಬ್ಯಾಂಕ್ ಗ್ರಾಹಕರು ಮತ್ತು ಕೆಆರ್‌ಎಸ್ ಪಕ್ಷದ ಮಹೇಶ್ ರೆಡ್ಡಿ ಬ್ಯಾಂಕ್ ಶಾಖೆಗೆ ಬಂದು ಅಸಮಾಧಾನ ವ್ಯಕ್ತಪಡಿಸಿದರು. 

ಕನ್ನಡ ಭಾಷೆ ಗೊತ್ತಿಲ್ಲದಿದ್ದರೆ, ಕಲಿಯುತ್ತೇನೆ ಎನ್ನಬೇಕು. ಕನ್ನಡದಲ್ಲಿ ವ್ಯವಹಾರ ನಡೆಸಬೇಕು ಇಲ್ಲವಾದಲ್ಲಿ, ಕರ್ನಾಟಕದಲ್ಲಿ ಇರುವುದು ಬೇಡ. ಕನ್ನಡ ಭಾಷೆ ಬಗ್ಗೆ ತಾತ್ಸರ ತೋರುವುದು ಸರಿಯಲ್ಲ. ಸ್ಥಳೀಯ ಭಾಷೆ ಕಲಿಯಲು 6 ತಿಂಗಳು ಆರ್‌ಬಿಐ ಕಾಲಾವಕಾಶ ನೀಡುತ್ತದೆ. ಆದಾಗ್ಯೂ, ರಾಮಸಾಗರ ಶಾಖೆ ವ್ಯವಸ್ಥಾಪಕರು ಕನ್ನಡ ಕಲಿಯದಿರುವುದು ಖಂಡನೀಯ. ಕೆಲವು ತಿಂಗಳ ಹಿಂದೆ ಸೂರ್ಯಸಿಟಿಯಲ್ಲೂ ಇದೇ ರೀತಿ ಆಗಿತ್ತು ಎಂದು ಕೆಆರ್‌ಎಸ್‌ನ ಮಹೇಶ್ ರೆಡ್ಡಿ ತಿಳಿಸಿದರು. 

ADVERTISEMENT

ಇಬ್ಬರ ನಡುವಿನ ಮಾತಿನ ಚಕಮಕಿಯನ್ನು ಒಂದೆಡೆ ಕೆಆರ್‌ಎಸ್‌ನ ಮಹೇಶ್‌ ರೆಡ್ಡಿ ಮತ್ತು ಕೆನರಾ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಮೊಬೈಲ್‌ನಲ್ಲಿ ಪರಸ್ಪರ ವಿಡಿಯೊ ಮಾಡಿಕೊಳ್ಳುತ್ತಿವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಕೆನರಾ ಬ್ಯಾಂಕ್‌ ಸಹ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ ಮಾಡಿದೆ. ಕನ್ನಡ ನಮ್ಮ ನೆಲೆ ನಿಮ್ಮ ಬೆಂಬಲ ನಮ್ಮ ಬಲ. ರಾಜ್ಯದ ಪ್ರತಿಯೊಂದು ಶಾಖೆಯಲ್ಲೂ ಸ್ಥಳೀಯ ಭಾಷೆಯಲ್ಲಿ ಸೇವೆ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.