ADVERTISEMENT

ಕುಲ ಕಸುಬು ಗೌರವಿಸಿ, ಜಾತಿ ಶೋಷಣೆ ನಿಲ್ಲಿಸಿ: ಎಸ್.ಭವ್ಯಾಮಹೇಶ್

ಸವಿತಾ ಮಹರ್ಷಿ ಜಯಂತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:36 IST
Last Updated 29 ಜನವರಿ 2026, 5:36 IST
ವಿಜಯಪುರ ಪುರಸಭೆಯಲ್ಲಿ ಸವಿತಾ ಮಹರ್ಷಿ ಜಯಂತಿ ನಡೆಯಿತು
ವಿಜಯಪುರ ಪುರಸಭೆಯಲ್ಲಿ ಸವಿತಾ ಮಹರ್ಷಿ ಜಯಂತಿ ನಡೆಯಿತು   

ವಿಜಯಪುರ (ದೇವನಹಳ್ಳಿ): ಪ್ರತಿಯೊಂದು ಸಮುದಾಯವನ್ನು ಗೌರವಿಸಬೇಕು. ಆ ಜನಾಂಗದ ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಹೇಳಿದರು.

ಪುರಸಭೆಯಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿಯಲ್ಲಿ ಮಾತನಾಡಿದರು.

ಜಾತಿ ವ್ಯವಸ್ಥೆ ಮೇಲೆ ನಂಬಿಕೆ ಬೇಡ. ಇರುವುದು ಎರಡೇ ಜಾತಿ, ಗಂಡು ಮತ್ತು ಹೆಣ್ಣು. ಶಿಕ್ಷಣದಿಂದ ಸ್ವಾವಲಂಬಿ ಬದುಕಿನೊಂದಿಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ. ಕುಲ ಕಸುಬುಗಳು ಅವರವರ ಬದುಕಿಗೆ ಹೊರತು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಶೋಷಣೆ ಮಾಡುವುದಲ್ಲ ಎಂದು ಹೇಳಿದರು.

ADVERTISEMENT

ಪ್ರತಿಯೊಬ್ಬನಲ್ಲಿಯೂ ತಾನು ಮಾಡುವ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ನಾವೆಲ್ಲರೂ ಭಾರತೀಯ, ಪರಸ್ವರ ವಿಶ್ವಾಸ, ಗೌರವದೊಂದಿಗೆ ಧರ್ಮ ರಕ್ಷಿಸುವ ಸತ್ಕಾರ್ಯ ನಡೆಯಬೇಕು ಎಂದರು.

ಸವಿತಾ ಸಮಾಜದ ಮುಖಂಡ ಮಂಜುನಾಥ್ ಮಾತನಾಡಿ, ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವಾನುದೇವತೆಗಳ ಆಯುಷ್ಕರ್ಮ ಸೇವೆ ಮಾಡುತ್ತಿದ್ದಾರೆಂದು ಕಾಶಿಯಲ್ಲಿ ದೊರೆತ ಮಹಾಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬೇಕು. ಪಟ್ಟಣದಲ್ಲಿ ಯಾವುದಾದರು ಒಂದು ರಸ್ತೆಗೆ ಸವಿತಾ ಮಹರ್ಷಿಗಳ ಹೆಸರು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು.

ಸವಿತಾ ಸಮಾಜದ ಉಪಾಧ್ಯಕ್ಷ ಮುನಿವೆಂಕಟಪ್ಪ, ಮುಖಂಡರಾದ ಹರೀಶ್, ಎನ್.ರಾಜು, ರಮೇಶ್, ಶಂಕರ್, ಲೋಕೇಶ್, ಹುರುಳಗುರ್ಕಿ ಮಂಜುನಾಥ್, ರಾಮಮೂರ್ತಿ, ಶಿವರಾಜ್, ಚಂದ್ರು, ದೇವರಾಜು, ಗಿರೀಶ್ ಇದ್ದರು.

ಪುರಸಭೆ ಸದಸ್ಯರ ಗೈರು: ಬೇಸರ

‘ನಾವು ಜಾತಿ ಮತ ಬೇಧವಿಲ್ಲದೆ ಎಲ್ಲಾ ಸಮುದಾಯಗಳ ಜನರಿಗೂ ಆಯುಷ್ಕರ್ಮ (ಕ್ಷೌರ) ಮಾಡುತ್ತೇವೆ. ಆದರೆ ಸವಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮಕ್ಕೆ 23 ಮಂದಿ ಪುರಸಭೆ ಸದಸ್ಯರ ಪೈಕಿ ಕೇವಲ ಇಬ್ಬರು ಮಾತ್ರ ಬಂದಿದ್ದಾರೆ’ ಎಂದು ಸವಿತಾ ಸಮಾಜದ ಅಧ್ಯಕ್ಷ ನಂಜುಂಡಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.