ADVERTISEMENT

ದಲಿತರು ಸೈದ್ಧಾಂತಿಕವಾಗಿ ಒಗ್ಗೂಡಲಿ: ಕೆ.ಶಿವರಾಮು

ಛಲವಾದಿ ಮಹಾಸಭಾದ ಸಮಾವೇಶದಲ್ಲಿ ಕೆ.ಶಿವರಾಮು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 3:58 IST
Last Updated 19 ಸೆಪ್ಟೆಂಬರ್ 2022, 3:58 IST
ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಛಲವಾದಿ ಮಹಾಸಭಾದ ಸಮಾವೇಶ ಮತ್ತು ಸಂಘದ ನೂತನ ಆಡಳಿತ ಮಂಡಳಿಗೆ ಅಭಿನಂದನಾ ಸಮಾರಂಭವನ್ನು ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಮು ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಛಲವಾದಿ ಮಹಾಸಭಾದ ಸಮಾವೇಶ ಮತ್ತು ಸಂಘದ ನೂತನ ಆಡಳಿತ ಮಂಡಳಿಗೆ ಅಭಿನಂದನಾ ಸಮಾರಂಭವನ್ನು ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಮು ಉದ್ಘಾಟಿಸಿದರು   

ಆನೇಕಲ್:ಭಿನ್ನಾಭಿಪ್ರಾಯ ಮರೆತು ಸೈದ್ಧಾಂತಿಕವಾಗಿ ಸಂಘಟಿತರಾಗುವ ನಿಟ್ಟಿನಲ್ಲಿ ಛಲವಾದಿ ಸಮಾಜದವರು ರಾಜ್ಯದಾದಂತ್ಯ ಸಂಘಟಿತರಾಗಬೇಕು ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಮು ಹೇಳಿದರು.

ತಾಲ್ಲೂಕಿನ ಜಿಗಣಿಯಲ್ಲಿ ಭಾನುವಾರ ಆಯೋಜಿಸಿದ್ದ ಛಲವಾದಿ ಮಹಾಸಭಾದ ಸಮಾವೇಶ ಮತ್ತು ಸಂಘದ ನೂತನ ಆಡಳಿತ ಮಂಡಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜ ಒಗ್ಗೂಡಿದರೆ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ. ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ದಲಿತರಿದ್ದರೂ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ದೊರಯಲಿಲ್ಲ. ಹಾಗಾಗಿ ಶೋಷಿತ ಸಮಾಜದ ಎಲ್ಲರೂ ಒಗ್ಗೂಡಿ ಸಂಘಟಿತರಾದರೆ ಸಮರ್ಥವಾಗಿ ಹಕ್ಕೊತ್ತಾಯ ಮಾಡಲು ಸಾಧ್ಯ’ ಎಂದರು.

ADVERTISEMENT

‘ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸಮುದಾಯದ ಜನರನ್ನು ಸಂಘಟಿಸಿ ಬೃಹತ್‌ ಸಮಾವೇಶ ನಡೆಸಲಾಗುವುದು’ ಎಂದು ಹೇಳಿದರು.

‘ಛಲವಾದಿ ಮಹಾಸಭಾಗೆ ಕೆಂಗೇರಿಯ ಬಳಿ ಬೆಲೆ ಬಾಳುವ ಎರಡು ಎಕರೆ ಜಮೀನು ಮತ್ತು ₹10 ಕೋಟಿ ಅನುದಾನವನ್ನು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀಡಿ, ಸಮಾಜದ ಬೇಡಿಕೆಗೆ ಸ್ಪಂದಿಸಿದ್ದರು. ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರನ್ನು ಆಹ್ವಾನಿಸಿ ಸಮಾಜದ
ಬೇಡಿಕೆಗಳನ್ನು ಮಂಡಿಸಲಾಗುವುದು. ವೈದ್ಯಕೀಯ ಕಾಲೇಜು ಸ್ಥಾಪನೆಗೆ ಜಮೀನು ಮತ್ತು ಅನುಮತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಮಾಡಲಾಗುವುದು’ ಎಂದರು.

ಮುಖಂಡ ಜಯರಾಜು ಮಾತನಾಡಿ, ಛಲವಾದಿ ಮಹಾಸಭಾಗೆ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ನೊಂದಣಿ ಮಾಡಬೇಕು. ಪ್ರತಿ ತಾಲ್ಲೂಕುಗಳಲ್ಲೂ ಘಟಕಗಳನ್ನು ಸ್ಥಾಪಿಸಬೇಕು. ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅವಶ್ಯಕ ಕಾರ್ಯಕ್ರಮ ರೂಪಿಸಬೇಕು. ಛಲವಾದಿ ಸಮುದಾಯದ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಮಹಾಸಭಾದ ನೂತನ ಕಾರ್ಯಕಾರಿ ಮಂಡಳಿ ಕೆಲಸ ಮಾಡಬೇಕು’ ಎಂದರು.

ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಜಿಗಣಿ ಮುನಿಯಪ್ಪ ಮಾತನಾಡಿ, ಕೆ.ಶಿವರಾಮು ಅವರ ನೇತೃತ್ವದ ತಂಡ ಚುನಾವಣೆಯಲ್ಲಿ 15ಕ್ಕೆ 15 ಸ್ಥಾನಗಳಲ್ಲೂ ಗೆಲ್ಲುವ ಮೂಲಕ ಸಾಧನೆ ಮಾಡಿದೆ. ತಮ್ಮ ಕೆಲಸಗಳ ಮೂಲಕ ಎಲ್ಲಾ ಸಂಘಗಳಿಗೂ ಮಾದರಿಯಾಗುಂತೆ ಕಾರ್ಯನಿರ್ವಹಿಸಬೇಕು ಎಂದರು.

ಛಲವಾದಿ ಮಹಸಭಾದ ಉಪಾಧ್ಯಕ್ಷ ಬಸವರಾಜು, ಸಂಘಟನಾ ಕಾರ್ಯದರ್ಶಿ ಹಂಸರಾಜು, ಖಜಾಂಚಿ ಮೈಕೋ ನಾಗರಾಜು, ನಿರ್ದೇಶಕರಾದ ಆನೇಕಲ್‌ ಬಿ.ಮಹದೇವಯ್ಯ, ಬಿ.ರಾಜಪ್ಪ, ನಾಗೇಶ್‌ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಸಮುದಾಯದ ಸದಸ್ಯರನ್ನು ಸನ್ಮಾನಿಸಲಾಯಿತು.

ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ರಾಜಪ್ಪ, ಹೆಬ್ಬಗೋಡಿ ನಗರಸಭಾ ಸದಸ್ಯೆ ಜ್ಯೋತಿ ಕೃಷ್ಣಪ್ಪ, ಜಿಗಣಿ ಪುರಸಭಾ ಸದಸ್ಯ ಫ್ಯಾನ್ಸಿ ರಮೇಶ್, ಚಂದಾಪುರ ಪುರಸಭಾ ಸದಸ್ಯ ವೆಂಕಟಸ್ವಾಮಿ, ವಕೀಲ ತಿರುಪಾಳ್ಯ ಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಬೆಟ್ಟದಾಸನಪುರ ನಾರಾಯಣಸ್ವಾಮಿ, ಮಧುಕುಮಾರ್, ಮುನಿವೀರಪ್ಪ, ನರೇಂದ್ರ, ಸೌಭಾಗ್ಯ ನಾಗರಾಜು, ನಾಗಮ್ಮ ಮುನಿರಾಜು, ಮುಖಂಡರಾದ ರಾಮಕುಮಾರ್, ದೊಡ್ಡನಾಗಮಂಗಲ ವಸಂತ್‌, ಆಂಜಿ, ಕುಳ್ಳಪ್ಪ, ಜಿಗಣಿ ಶ್ರೀನಿವಾಸ್, ಜೆ.ಸಿ.ನಾಗೇಶ್‌, ಬೊಮ್ಮಂಡಹಳ್ಳಿ ನಾಗರಾಜು, ಡಿ.ರಮೇಶ್, ಕೂಗುರು ಮುನಿಯಪ್ಪ, ಬಸವರಾಜು, ಎಸ್‌.ಟಿ.ಡಿ.ರಮೇಶ್‌, ಯೋಗೇಶ್, ಸರ್ಜಾಪುರ ಶ್ರೀನಿವಾಸ್‌, ರಾಮಾಂಜಿ, ರಮೇಶ್‌, ರುದ್ರಪ್ಪ, ಪ್ರಭಾಕರ್‌ ಇದ್ದರು.

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

ಕೆಂಗೇರಿಯ ದೊಡ್ಡ ಬಸ್ತಿ ಬಳಿ ನಿರ್ಮಿಸಿರುವ ಛಲವಾದಿ ಭವನದ ಸಮೀಪ ಮೂರು ಕೋಟಿ ವೆಚ್ಚದಲ್ಲಿ ಐಎಎಸ್‌, ಕೆಎಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕೆ.ಶಿವರಾಮು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.