ADVERTISEMENT

ನಡೆಯದ ಪರಿಶಿಷ್ಟರ ಕುಂದುಕೊರತೆ ಸಭೆ: ಚನ್ನಪಟ್ಟಣ ಆಡಳಿತ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:58 IST
Last Updated 20 ಡಿಸೆಂಬರ್ 2025, 7:58 IST
ಮತ್ತೀಕೆರೆ ಹನುಮಂತಯ್ಯ
ಮತ್ತೀಕೆರೆ ಹನುಮಂತಯ್ಯ   

ಚನ್ನಪಟ್ಟಣ: ತಾಲ್ಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸಮುದಾಯದ ಕುಂದು ಕೊರತೆ ಸಭೆ ನಡೆಸಿ ಒಂದು ವರ್ಷ ಕಳೆದಿದೆ. ಸಮುದಾಯದ ಸಮಸ್ಯೆ ಪರಿಹರಿಸಲು ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ದಲಿತ ಸಮುದಾಯದ ಮುಖಂಡ ಮತ್ತೀಕೆರೆ ಹನುಮಂತಯ್ಯ ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಸಮುದಾಯದ ಕಳೆದ ವರ್ಷ ಡಿಸೆಂಬರ್ ನಲ್ಲಿ ಕುಂದು ಕೊರತೆ ಸಭೆ ನಡೆಸಲಾಗಿತ್ತು. ಅಂದು ಶಾಸಕ ಸಿ.ಪಿ. ಯೋಗೇಶ್ವರ್ ಅವರು ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಸಮುದಾಯದ ಕುಂದು ಕೊರತೆ ಸಭೆ ನಡೆಸಿ ಅಹವಾಲು ಆಲಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದರು. ಆದರೂ ವರ್ಷ ಕಳೆದರೂ ಮತ್ತೊಂದು ಸಭೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

ನಂತರದ ದಿನಗಳಲ್ಲಿ ಹೊಸ ತಹಶೀಲ್ದಾರ್ ಬಂದರೂ ಅವರು ಸಹ ಸಭೆ ನಡೆಸಿಲ್ಲ. ಸಭೆ ಕರೆಯುವಂತೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಈ ಬಗ್ಗೆ ಆಗಸ್ಟ್ ತಿಂಗಳಿನಲ್ಲಿ ತಾಲ್ಲೂಕಿಗೆ ಆಗಮಿಸಿದ್ದ ಲೋಕಾಯುಕ್ತರಿಗೂ ದೂರು ನೀಡಲಾಗಿತ್ತು. ಆಗ ಸ್ಥಳದಲ್ಲೇ ಇದ್ದ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಪರಿಶಿಷ್ಟ ಸಮುದಾಯದ ಕುಂದು ಕೊರತೆ ಸಭೆ ನಡೆಸುವಂತೆ ಸೂಚಿಸಿದ್ದರು. ಆದರೂ ಇಂದಿಗೂ ಸಭೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಲ್ಲೂಕು ಆಡಳಿತ ಶೀಘ್ರವೇ ಪರಿಶಿಷ್ಟ ಸಮುದಾಯದ ಕುಂದುಕೊರತೆ ಸಭೆ ಕರೆದು ಸಮುದಾಯದ ಸಮಸ್ಯೆಗಳನ್ನು ಪರಿಹರಿಸಬೇಕು. ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಅರೆ ಬೆತ್ತಲೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹನುಮಂತಯ್ಯ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.