ADVERTISEMENT

ಫಲವತ್ತಾದ ಭೂಮಿಯ ಸ್ವಾಧೀನ ಬೇಡ: ನಿಸರ್ಗ ನಾರಾಯಣಸ್ವಾಮಿ

ಕೆಐಎಡಿಬಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ತಾಕೀತು

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 5:09 IST
Last Updated 2 ಜನವರಿ 2023, 5:09 IST
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೋರಾಟಗಾರರೊಂದಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಭೂಸ್ವಾಧೀನ ಕುರಿತಾದ ಭಿತ್ತಿಪತ್ರ ಪ್ರದರ್ಶಿದರು
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೋರಾಟಗಾರರೊಂದಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಭೂಸ್ವಾಧೀನ ಕುರಿತಾದ ಭಿತ್ತಿಪತ್ರ ಪ್ರದರ್ಶಿದರು   

ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿಯಲ್ಲಿ ಫಲವತ್ತಾದ ಭೂಮಿಯನ್ನು ಭೂಸ್ವಾಧೀನ ಪಡೆಸಿಕೊಳ್ಳುವುದನ್ನು ಕೆಐಎಡಿಬಿ ಕೈಬಿಡಬೇಕು. ಸಮೀಪ ಜಿಲ್ಲೆಯಲ್ಲಿ ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಕೈಗಾರಿಕೆ ನಿರ್ಮಿಸಲಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪಡಿಸುತ್ತಿರುವ ವಿಷಯವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆಐಎಡಿಬಿ ಒಂದೇ ತಾಲ್ಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡಿರುವುದು ಸರಿಯಲ್ಲ. ಈ ನಿರ್ಧಾರವನ್ನು ಕೈ ಬಿಟ್ಟು ಕೋಲಾರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಾಲೂರು, ಬಾಗೇಪಲ್ಲಿ, ಗುಡಿಬಂಡೆ ಮುಂತಾದ ಕಡೆ ಕೃಷಿಗೆ ಯೋಗ್ಯವಲ್ಲದ ಭೂಮಿ ಸಾಕಷ್ಟು ಸಿಗುತ್ತದೆ. ಅಲ್ಲಿ ಕೈಗಾರಿಕೆ ವಲಯ ಸ್ಥಾಪಿಸಿ ಅಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಲಿ ಎಂದು ಹೇಳಿದರು.

ADVERTISEMENT

ರೈತರ ಫಲವತ್ತಾದ ಭೂಮಿಗಳಲ್ಲಿ ಕೆಐಎಡಿಬಿ ಭೂಸ್ವಾಧೀನಪಡಿಸಿಕೊಳ್ಳಬಾರದು ಎಂದು ವಿಧಾನಮಂಡಲದ ಅಧಿವೇಶನದಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದೇನೆ. ಆದರೆ ಬಿಜೆಪಿ ಸರ್ಕಾರಕ್ಕೆ ಕಿವಿ ಕಣ್ಣು ಇಲ್ಲದಂತಾಗಿದೆ. ರೈತರ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ರೈತರ ಕೂಗಿಗೆ ಸರ್ಕಾರ ಸ್ಪಂದಿಸದೇ ಇರುವುದು ಖಂಡನೀಯ ಎಂದರು.

ಒಂದೇ ಹೋಬಳಿಯಲ್ಲಿ 4 ಬಾರಿ ಜಮೀನು ಸ್ವಾಧೀನಗೊಳಿಸುತ್ತಿರುವುದು ಸರ್ಕಾರದ ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್.ಮುನೇಗೌಡ, ಜೆಡಿಎಸ್ ಮುಖಂಡ ರಬ್ಬನಹಳ್ಳಿ ಪ್ರಭಾಕರ್, ವಕೀಲ ಎಂ.ಎಂ. ಶ್ರೀನಿವಾಸ್, ಕಾಳಪ್ಪನವರ ವೆಂಕಟೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅತ್ತಿಬೆಲೆ ನರಸಪ್ಪ, ಭೂ ಸ್ವಾಧೀನ ಹೋರಾಟ ಸಮಿತಿಯ ನಂಜಪ್ಪಮಟ್ಟಬಾರ್ಲು, ಹ್ಯಾಡಾಳ, ಪೋಲನಹಳ್ಳಿ, ಚನ್ನರಾಯಪಟ್ಟಣ ಹೋಬಳಿಯ ರೈತ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.