ADVERTISEMENT

‘ಮಕ್ಕಳಿಗೆ ಪ್ರಚಲಿತ ವಿದ್ಯಮಾನ ಜಾಗೃತಿ ಮೂಡಿಸಿ’

vijayapura

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 13:40 IST
Last Updated 11 ಏಪ್ರಿಲ್ 2019, 13:40 IST
ವಿಜಯಪುರ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ರಾಷ್ಟ್ರಧ್ವಜ ಕುರಿತು ಭಾರತ ಸೇವಾದಳದ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮಕ್ಕಳಿಗೆ ತರಬೇತಿ ನೀಡಿದರು  
ವಿಜಯಪುರ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ರಾಷ್ಟ್ರಧ್ವಜ ಕುರಿತು ಭಾರತ ಸೇವಾದಳದ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮಕ್ಕಳಿಗೆ ತರಬೇತಿ ನೀಡಿದರು     

ವಿಜಯಪುರ: ಮಕ್ಕಳಿಗೆ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಜಾಗೃತಿ ಮೂಡಿಸಿ ಅವರಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ಕೆ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕಿ ಪ್ರತಿಭಾ ಹೇಳಿದರು.

ಇಲ್ಲಿನ 6ನೇ ವಾರ್ಡ್‌ನಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆ ರಜಾ ಶಿಬಿರದಲ್ಲಿ ಅವರು ಮಾತನಾಡಿದರು.

ಶಿಬಿರದಲ್ಲಿ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಗಳ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ಅವರಲ್ಲಿ ವ್ಯವಹಾರದ ಜ್ಞಾನ ಹೆಚ್ಚಿಸುವುದು, ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಹೇಗೆ ನಿಭಾಯಿಸಬೇಕು ಎನ್ನುವ ಅಂಶಗಳೂ ಸೇರಿದಂತೆ ಮಕ್ಕಳಲ್ಲಿ ಕ್ರಿಯಾತ್ಮಕವಾದ ಗುಣಗಳನ್ನು ಬೆಳೆಸಿ ಅವರನ್ನು ಶೈಕ್ಷಣಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದುವಂತೆ ನೋಡಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಪಠ್ಯ ಚಟುವಟಿಕೆಗೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆ ಕಡೆಗೂ ತರಬೇತಿಗೊಳಿಸುವಂತಹ ಕೆಲಸ ಮಾಡಲಾಗುತ್ತಿದೆ. ಕ್ರೀಡೆಗಳ ಮೂಲಕ ಅವರಲ್ಲಿ ಕಲಿಕೆ ಬಗ್ಗೆ ಹೆಚ್ಚು ಉತ್ಸಾಹ ಮೂಡುವಂತೆ ತರಬೇತಿಗೊಳಿಸಲಾಗುತ್ತಿದೆ ಎಂದರು.

ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ತಾಲ್ಲೂಕು ಸಂಯೋಜಕ ಸತೀಶ್ ನಾಯಕ್ ಮಾತನಾಡಿ, ಮಕ್ಕಳಿಗೆ ಕಲಿಕೆ ಜೊತೆಯಲ್ಲೆ ರಾಷ್ಟ್ರಗೀತೆ, ರಾಷ್ಟ್ರದ್ವಜ, ರಾಷ್ಟ್ರಪ್ರೇಮ ಕುರಿತು ಮಾಹಿತಿ ತಿಳಿಸಿಕೊಡುವ ಕೆಲಸವನ್ನೂ ಮಾಡಲಾಗುತ್ತಿದೆ. ಮಕ್ಕಳು ಗಿಡಮೂಲಿಕೆಗಳಿಂದ ಅನೇಕ ಔಷಧಿಗಳ ತಯಾರಿಕೆಯನ್ನೂ ಕಲಿಯುತ್ತಿದ್ದಾರೆ ಎಂದರು.

ಮುಖ್ಯ ಶಿಕ್ಷಕ ಮನೋಹರ್, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಮುಖ್ಯಸ್ಥ ಆನಂದ್ ಕುಲಕರ್ಣಿ, ಜಗದೀಶ್ ಕುಮಾರ್, ವಂದನಾ, ಸಂಪನ್ಮೂಲ ವ್ಯಕ್ತಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.