ADVERTISEMENT

ಆನೇಕಲ್: ಮಕ್ಕಳ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 4:54 IST
Last Updated 15 ನವೆಂಬರ್ 2021, 4:54 IST
ಆನೇಕಲ್ ತಾಲ್ಲೂಕಿನ ಮರಸೂರು ಗೇಟ್ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು
ಆನೇಕಲ್ ತಾಲ್ಲೂಕಿನ ಮರಸೂರು ಗೇಟ್ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು   

ಆನೇಕಲ್: ಬಾಲ್ಯದಲ್ಲಿ ಕಲಿತ ವಿಷಯಗಳು ಜೀವನ ಪೂರ್ತಿ ಉಳಿಯುತ್ತವೆ. ಹಾಗಾಗಿ ಅಂಗನವಾಡಿಗಳಲ್ಲಿ ಮಕ್ಕಳು ಸಂತಸ ಸಂಭ್ರಮದಿಂದ ಕಲಿಯುವಂತಹ ವಾತಾವರಣ ನಿರ್ಮಿಸುವ ಅವಶ್ಯಕತೆಯಿದೆ ಎಂದು ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ರೆಡ್ಡಿ ತಿಳಿಸಿದರು.

ಅವರು ತಾಲ್ಲೂಕಿನ ಮರಸೂರು ಗೇಟ್‌ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳು ಮತ್ತು ಟೀಶರ್ಟ್‌ ವಿತರಿಸಿ ಮಾತನಾಡಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಕ್ಕಳು ಅಂಗನವಾಡಿಗಳಿಗೆ ಬರುತ್ತಿರಲಿಲ್ಲ. ಸರ್ಕಾರ ಭೌತಿಕ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗುತ್ತದೆ. ಪ್ರಧಾನಿ ಜವಹಾರ್‌ಲಾಲ್‌ ನೆಹರೂ ಅವರು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಿದ್ದರು. ಅವರ ಚಿಂತನೆಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿವೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ರೆಡ್ಡಿ ಮಾತನಾಡಿ, ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ಕಲಿಸಲು ಸಾಧ್ಯ. ಪುಟಾಣಿ ಮಕ್ಕಳಿಗೆ ಒಳ್ಳೆಯ ವಿಚಾರ, ನಡವಳಿಕೆಗಳನ್ನು ಬಾಲ್ಯದಿಂದಲೇ ಕಲಿಸಿದರೆ ಅವರು ಸಮಾಜದ ಆಸ್ತಿಯಾಗುತ್ತಾರೆ. ಹಾಗಾಗಿ ಸಂಘ– ಸಂಸ್ಥೆಗಳು ಅಂಗನವಾಡಿಗಳಿಗೆ ಹೆಚ್ಚಿನ ಸಹಕಾರ ನೀಡಬೇಕು. ಮರಸೂರು ಗೇಟ್‌ನ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಇತ್ತೀಚೆಗೆ ನಿವೇಶನ ದೊರೆತಿದೆ. ಮುಂದಿನ ಮಕ್ಕಳ ದಿನಾಚರಣೆಯೊಳಗಡೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪುನೀತ್‌ ರಾಜಕುಮಾರ್‌ ಅವರಿಗೆಶ್ರದ್ಧಾಂಜಲಿ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ರೆಡ್ಡಿ, ಸದಸ್ಯ ನಿರ್ಮಲಾ ಆನಂದ್‌, ಮುಖಂಡರಾದ ಶಿವರಾಮರೆಡ್ಡಿ, ಎಸ್‌.ಟಿ.ಡಿ. ರಮೇಶ್‌, ಪ್ರಕಾಶ್‌, ಸುರೇಶ್‌, ಮೇಲ್ವಿಚಾರಕಿ ಭಾರತಿ, ಕೇಂದ್ರದ ಪ್ರತಿಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.