ADVERTISEMENT

ಬನ್ನೇರುಘಟ್ಟ: ತಬ್ಬಲಿ ಚಿರತೆ ಮರಿಗಳಿಗೆ ಆಶ್ರಯ

ಉದ್ಯಾನವನದಲ್ಲಿ 14 ಚಿರತೆ ಮರಿಗಳ ಆರೈಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2023, 5:40 IST
Last Updated 19 ಮೇ 2023, 5:40 IST
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಉದ್ಯಾನದಲ್ಲಿ ವಿವಿಧೆಡೆ ಸಂರಕ್ಷಿಸಿ ತರಲಾದ ಚಿರತೆ ಮರಿಗಳು
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಉದ್ಯಾನದಲ್ಲಿ ವಿವಿಧೆಡೆ ಸಂರಕ್ಷಿಸಿ ತರಲಾದ ಚಿರತೆ ಮರಿಗಳು   

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನ ರಾಜ್ಯದ ವಿವಿಧೆಡೆ ತಾಯಿಯಿಂದ ಬೇರ್ಪಟ್ಟು ತಬ್ಬಲಿಯಾದ ಚಿರತೆ ಮರಿಗಳಿಗೆ ಆಶ್ರಯ ತಾಣವಾಗಿದೆ.

ಕಳೆದ ಒಂದು ತಿಂಗಳಿನಿಂದ ರಾಜ್ಯದ ವಿವಿಧೆಡೆಯಿಂದ ಬಂದ ಒಟ್ಟು 14 ಚಿರತೆ ಮರಿಗಳನ್ನು ಉದ್ಯಾನದ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಬಿಳಿಗಿರಿ ರಂಗನಬೆಟ್ಟದಿಂದ 6 ಮರಿಗಳು ಮತ್ತು ಮದ್ದೂರು, ಮೈಸೂರಿನಿಂದ ತಲಾ 3ರಂತೆ ಒಟ್ಟು 6 ಮರಿಗಳು, ಟಿ.ನರಸೀಪುರದಿಂದ 2 ಮರಿಗಳನ್ನು ಸಂರಕ್ಷಿಸಿ ತರಲಾಗಿದೆ.

ಒಂದು ತಿಂಗಳಿನಿಂದ ಮೂರು ತಿಂಗಳೊಳಗಿನ ಮರಿಗಳಾಗಿವೆ. ಮರಿ ಹಾಕಿದ ನಂತರ ಕೆಲವೊಮ್ಮೆ ತಾಯಿಯು ಮರಿಗಳಿಂದ ಬೇರ್ಪಡುತ್ತದೆ. ಕಬ್ಬಿನ ಗದ್ದೆ, ತೋಟಗಳ ಬಳಿ ಮರಿಗಳು ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಂಡಿದ್ದು ಸಂರಕ್ಷಿಸಿ ಅರಣ್ಯ ಇಲಾಖೆ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹಸ್ತಾಂತರಿಸಲಾಗಿದೆ.

ADVERTISEMENT

ಮರಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ನೀಡಲಾಗಿದೆ. ಹಾಲಿನ ಜತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಉದ್ಯಾನದ ವೈದ್ಯ ಡಾ.ಉಮಾಶಂಕರ್‌ ತಿಳಿಸಿದರು.

ಚಿನ್ನಾಟದಲ್ಲಿ ತೊಡಗಿರುವ ಚಿರತೆ ಮರಿಗಳು

ತಬ್ಬಲಿ ಚಿರತೆ ಮರಿಗಳನ್ನು ಆರೇಳು ತಿಂಗಳು ಬೆಳೆಸಿದ ನಂತರ ಈ ಮರಿಗಳನ್ನು ಬನ್ನೇರುಘಟ್ಟದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿರುವ ಚಿರತೆ ಸಫಾರಿಗೆ ಬಿಡುವ ಉದ್ದೇಶವಿದೆ ಸುನೀಲ್‌ ಪನ್ವಾರ್‌ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ 

ಮರಿಗಳಿಗೆ ಹೆಚ್ಚಿನ ಕಾಳಜಿ ಅಗತ್ಯ ತಾಯಿಯ ಹಾಲಿಲ್ಲದ ಈ ಮರಿಗಳನ್ನು ದಷ್ಠ ಪುಷ್ಠವಾಗಿ ಬೆಳೆಸಬೇಕಾದರೆ ಹೆಚ್ಚಿನ ಕಾಳಜಿ ವಹಿಸಬೇಕು. ಒಂದು ತಿಂಗಳೊಳಗಿನ ಮರಿಗಳಿಗೆ ಅರ್ಧ ತಾಸಿಗೊಮ್ಮೆ ಹಾಲು ಕುಡಿಸಬೇಕು. ಅವುಗಳ ಚಲನವಲನಗಳ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್‌ ಪನ್ವಾರ್‌ ತಿಳಿಸಿದರು. ತಾಯಿಯಿಂದ ಬೇರ್ಪಟ್ಟು ತಬ್ಬಲಿಯಾಗಿರುವ ಮರಿಗಳನ್ನು ಬೆಳೆಸುವುದು ಒಂದು ಸವಾಲಾಗಿದೆ. ಬೇರೆ ಬೇರೆ ಕುಟುಂಬಗಳಿಗೆ ಸೇರಿದ ಮರಿಗಳನ್ನು ಒಂದೆಡೆ ಸೇರಿಸಿ ಅವುಗಳನ್ನು ಹೊಂದಾಣಿಕೆಯಿಂದ ಬೆಳೆಸುವ ನಿಟ್ಟಿನಲ್ಲಿ ಉದ್ಯಾನದ ಸಿಬ್ಬಂದಿ ದಿನದ 24ಗಂಟೆಯೂ ನಿಗಾ ವಹಿಸುತ್ತಾರೆ. ಮರಿಗಳಿಗೆ ಬಾಟಲಿಯಲ್ಲಿ ಮೇಕೆ ಹಾಲನ್ನು ಕುಡಿಸಲಾಗುತ್ತದೆ. ಒಂದು ತಿಂಗಳಿಗೂ ಹೆಚ್ಚು ಕಾಲ ಈ ಮರಿಗಳಿಗೆ ಮೇಕೆ ಹಾಲು ಆಹಾರವಾಗಿ ನೀಡಲಾಗುತ್ತದೆ. ಒಂದು ತಿಂಗಳ ನಂತರ ಚಿಕನ್‌ ಸೂಪ್‌ ನೀಡಿ ಇವುಗಳನ್ನು ಬೆಳೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.