ADVERTISEMENT

ಸೂಲಿಬೆಲೆ: ರಸ್ತೆ ಅವ್ಯವಸ್ಥೆ ಸರಿಪಡಿಸಲು ನಾಗರಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 6:01 IST
Last Updated 30 ನವೆಂಬರ್ 2021, 6:01 IST
ಸೂಲಿಬೆಲೆ ಹೋಬಳಿಯ ಗಿಡ್ಡಪ್ಪನಹಳ್ಳಿ-ನಗರೇನಹಳ್ಳಿ ರಸ್ತೆ ಮಧ್ಯದ ಸೇತುವೆ ಬಳಿ ಗುಂಡಿ ಬಿದ್ದಿರುವುದು
ಸೂಲಿಬೆಲೆ ಹೋಬಳಿಯ ಗಿಡ್ಡಪ್ಪನಹಳ್ಳಿ-ನಗರೇನಹಳ್ಳಿ ರಸ್ತೆ ಮಧ್ಯದ ಸೇತುವೆ ಬಳಿ ಗುಂಡಿ ಬಿದ್ದಿರುವುದು   

ಸೂಲಿಬೆಲೆ: ಹೋಬಳಿಯ ಗಿಡ್ಡಪ್ಪನಹಳ್ಳಿ-ನಗರೇನಹಳ್ಳಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಸೇತುವೆ ಮೇಲೆ ಮಣ್ಣು ತುಂಬಿಸಿರುವ ಪರಿಣಾಮ ದ್ವಿಚಕ್ರವಾಹನ ಹಾಗೂ ಲಘು ವಾಹನಗಳು ಕೇಸರಿನಲ್ಲಿ ಸಿಕ್ಕಿಕೊಳ್ಳುತ್ತಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸೂಲಿಬೆಲೆಯಿಂದ ಗಿಡ್ಡಪ್ಪನಹಳ್ಳಿ ಮಾರ್ಗವಾಗಿ ನಗರೇನಹಳ್ಳಿ ವರೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಗಿಡ್ಡಪ್ಪನಹಳ್ಳಿ– ನಗರೇನಹಳ್ಳಿ ರಸ್ತೆಯ ಮಧ್ಯ ಭಾಗದಲ್ಲಿ ಕಾಲುವೆ ಹಾದು ಹೋಗಿದ್ದು, ಈ ಕಾಲುವೆಗೆ ಸೇತುವೆ ನಿರ್ಮಿಸಲು ರಸ್ತೆ ಮುಚ್ಚಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಪಕ್ಕದಲ್ಲಿ ತಾತ್ಕಾಲಿಕವಾಗಿ ಕಚ್ಚಾ ರಸ್ತೆ ನಿರ್ಮಿಸಲಾಗಿತ್ತು.

ಇದೀಗ ಸೇತುವೆ ಅಭಿವೃದ್ಧಿ ಕಾಮಗಾರಿ ಮುಗಿದಿದೆ. ಸೇತುವೆ ಮೇಲೆ ರಸ್ತೆಯ ಪಕ್ಕದಲ್ಲಿನ ಮಣ್ಣನ್ನು ಹಾಕಲಾಗಿದೆ. ಸೇತುವೆ ಮೇಲೆ ಹಾಕಿರುವ ಮಣ್ಣನ್ನು ಸಮತಟ್ಟಾಗಿ ಮಾಡದ ಕಾರಣ ಇತ್ತೀಚೆಗೆ ಸುರಿದ ಮಳೆಯಿಂದ ಕೆಸರುಗದ್ದೆಯಾದಂತಾಗಿದೆ. ಸೇತುವೆ ಸಮೀಪ ತಾತ್ಕಾಲಿಕವಾಗಿ ನಿರ್ಮಿಸಿರುವ ಕಚ್ಚಾ ರಸ್ತೆಯೂ ವಾಹನಗಳು ಸಂಚರಿಸಲು ಯೋಗ್ಯ ಸ್ಥಿತಿಯಲ್ಲಿ ಇಲ್ಲದಂತಾಗಿದೆ.

ADVERTISEMENT

ದಿನನಿತ್ಯ ಈ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಲಘು ವಾಹನಗಳು ಮತ್ತು ಶಾಲಾ ವಾಹನಗಳು ಕೇಸರಿನಲ್ಲಿ ಹೂತುಕೊಳ್ಳುವುದು ಸಾಮಾನ್ಯವಾಗಿದೆ. ಇಲಾಖೆಯ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಸೇತುವೆ ಅಭಿವೃದ್ಧಿಪಡಿಸಿದ ನಂತರ ಸೇತುವೆಯ ಮೇಲೆ ಹಾಕಲು ರಸ್ತೆ ಬದಿಯಲ್ಲಿನ ಮಣ್ಣನ್ನು ಬಳಸಿಕೊಂಡಿದ್ದಾರೆ. ಇದರ ಪರಿಣಾಮ ರಸ್ತೆ ಪಕ್ಕದಲ್ಲಿ ಗುಂಡಿ ನಿರ್ಮಾಣವಾಗಿದೆ.

ಗುಂಡಿ ಬಿದ್ದಿರುವ ಸ್ಥಳದಲ್ಲಿ ಯಾವುದೇ ರೀತಿಯ ಎಚ್ಚರಿಕೆಯ ಫಲಕ ಅಳವಡಿಸಿಲ್ಲ. ವಾಹನ ಸವಾರರು ಸ್ವಲ್ಪ ಎಚ್ಚರತಪ್ಪಿದರೂ ಅನಾಹುತ ಸಂಭವಿಸುತ್ತದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಕಾಮಗಾರಿ ನಡೆಯುತ್ತಿರುವುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.