ADVERTISEMENT

ಪೌರತ್ವ ತಿದ್ದುಪಡಿ| ಕಾಂಗ್ರೆಸ್‌ನಿಂದ ಗೊಂದಲ: ವೈ.ಎ.ನಾರಾಯಣಸ್ವಾಮಿ ಟೀಕೆ

ವಿಜಯಪುರ: ವಿಧಾನ ಪರಿಷತ್ ಸದಸ್ಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 16:30 IST
Last Updated 14 ಡಿಸೆಂಬರ್ 2019, 16:30 IST
ವಿಜಯಪುರದ ನಂದಿನಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಭಾಗವಹಿಸಿದ್ದರು
ವಿಜಯಪುರದ ನಂದಿನಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಭಾಗವಹಿಸಿದ್ದರು   

ವಿಜಯಪುರ: ಮಾನವ ಸಂಪನ್ಮೂಲ ಅಭಿವೃದ್ಧಿಯಾಗಬೇಕು. ಕಂಪ್ಯೂಟರ್ ಯುಗದಲ್ಲಿ ಮಕ್ಕಳನ್ನು ಸರಿದಾರಿಗೆ ತರದಿದ್ದರೆ ಭವಿಷ್ಯದಲ್ಲಿ ಸಮಾಜಕ್ಕೆ ಮಾರಕವಾಗಿ ಪರಿಣಮಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ನಂದಿನಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.‌ ಮಕ್ಕಳು ದೇಶದ ಸಂಪತ್ತು. ಅವರಿಗೆ ಸಿಗಬೇಕಾದ ಉತ್ತಮ ಸಂಸ್ಕಾರ, ಗುರು ಹಿರಿಯರ ಮಾಗದರ್ಶನ ಇಲ್ಲವಾಗುತ್ತಿದೆ. ಮೊಬೈಲ್ ಗೀಳಿನಿಂದ ದಾರಿ ತಪ್ಪುತ್ತಿದ್ದಾರೆ. ತಂತ್ರಜ್ಞಾನ ಉತ್ತಮ ಕಾರ್ಯಕ್ಕೆ ಉಪಯೋಗವಾಗಬೇಕು. ಮೊಬೈಲ್ ಬಳಕೆಗೆ ಶಾಲೆಗಳಲ್ಲಿ ನಿಷೇಧವಿದೆ. ಆದರೂ, ಕೆಲ ಮಕ್ಕಳು ಬಳಕೆ ಮಾಡುತ್ತಿದ್ದಾರೆ. ಇದರ ದುಷ್ಪರಿಣಾಮ ಮಕ್ಕಳ ಮೇಲೆ ಆಗುತ್ತಿದೆ. ಈ ಬಗ್ಗೆ ಪೋಷಕರು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆ ಹೀನಸ್ಥಿತಿಗೆ ಸರ್ಕಾರದ ನೀತಿ ಕಾರಣ. ಹೊಸ ತಂತ್ರಜ್ಞಾನ ಬಂದರೂ ಹಳೆ ಪದ್ಧತಿಯಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಅಂಕಗಳ ಆಧಾರದಲ್ಲಿ ಶಿಕ್ಷಣ ಸಿಗುತ್ತಿದೆಯೇ ಹೊರತು ಜ್ಞಾನಾಧಾರಿತವಾಗಿ ಸಿಗುತ್ತಿಲ್ಲ. ಮಕ್ಕಳು ಸಮಾಜದಲ್ಲಿ ಎದುರಾಗುವ ಹೋರಾಟ ಗೆಲ್ಲುವ ರೀತಿಯಲ್ಲಿ ಸಿದ್ಧಪಡಿಸಬೇಕಾಗಿದೆ. ಶೈಕ್ಷಣಿಕವಾಗಿ ಹೊಸ ಆವಿಷ್ಕಾರ ಬರುತ್ತಿದೆ. ಅವುಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.‌

ADVERTISEMENT

ನಂದಿನಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಚೇತನ್ ಮಾತನಾಡಿ,‌ ವಿದ್ಯಾರ್ಥಿಗಳ ಜೀವನದಲ್ಲಿ ನಿರ್ದಿಷ್ಟ ಗುರಿ ಇರಬೇಕು. ಗುರಿಯೆಡೆಗೆ ಸಾಗಲು ಉತ್ತಮ ಪ್ರಯತ್ನವೂ ಇರಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರ್ತಿಸುವಂತಹ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು. ಅವರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅಂತಹ ಕ್ಷೇತ್ರಗಳಲ್ಲಿ ಅವರನ್ನು ತೊಡಗಿಸಲು ಪ್ರೇರೇಪಿಸಬೇಕು ಎಂದರು.

‘ಜನರಿಂದ ಅನರ್ಹರು ಅರ್ಹರಾದರು’: ಅನರ್ಹರನ್ನು ಜನರು ಅರ್ಹರಾಗಿ ಆಯ್ಕೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ವಶಕ್ಕೆ ಪಡೆಯಲಿದೆ. ಎಂಟಿಬಿ ನಾಗರಾಜ್‌, ಎಚ್.ವಿಶ್ವನಾಥ್‌ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ವಿಶ್ವಾಸವಿಲ್ಲದ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ವಿನಾಕಾರಣ ಗೊಂದಲ ಮೂಡಿಸುತ್ತಿದೆ. ಈ ಕಾಯ್ದೆಯಿಂದ ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮದ ಜನರಿಗೆ ತೊಂದರೆ ಆಗುವುದಿಲ್ಲ. ಐದು ವರ್ಷಗಳಿಂದ ಇಲ್ಲಿ ನೆಲೆಸಿರುವವರಿಗೆ ಯಾವುದೇ ಸಮಸ್ಯೆ ಇಲ್ಲ. ಹೊಸದಾಗಿ ಇಲ್ಲಿ ನೆಲೆಸಲು ಯತ್ನ ಮಾಡುತ್ತಿರುವವರು, ಅಕ್ರಮವಾಗಿ ವಲಸೆ ಬರುವವರಿಗೆ ಈ ತಿದ್ದುಪಡಿ ಕಾಯ್ದೆಯಿಂದ ಸಮಸ್ಯೆಯಾಗಲಿದೆ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಕ್ಕಳು ವಿವಿಧ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಪ್ರಾಂಶುಪಾಲ ಪಿ.ಟಿ.ಜೋಸೆಫ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾವೀರೇಗೌಡ, ಮದನ್‌ದಾಸ್.ಪಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.