ADVERTISEMENT

ನಗರದ ರಸ್ತೆ ವಿಸ್ತರಣೆ ಅನಿವಾರ್ಯ; ಶಾಸಕ

ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಹರಿದ ಬಂದ ಮನವಿಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 9:46 IST
Last Updated 1 ಡಿಸೆಂಬರ್ 2018, 9:46 IST
ದೊಡ್ಡಬಳ್ಳಾಪುರದ ನಗರಸಭೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಶಾಸಕ ಟಿ.ವೆಂಕಟರಮಣಯ್ಯರಿಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ದೊಡ್ಡಬಳ್ಳಾಪುರದ ನಗರಸಭೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಶಾಸಕ ಟಿ.ವೆಂಕಟರಮಣಯ್ಯರಿಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.   

ದೊಡ್ಡಬಳ್ಳಾಪುರ: ನಗರದ ಅಭಿವೃದ್ಧಿ ಹಿತದೃಷ್ಟಿಯಿಂದಾಗಿ ರಸ್ತೆ ವಿಸ್ತರಣೆ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ. ಅನವಶ್ಯಕ ಯಾರನ್ನು ನಿರಾಶ್ರಿತರನ್ನಾಗಿಸದಂತೆ ಈಗಾಗಲೇ ಅಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರಸಭೆಯಲ್ಲಿ ಶುಕ್ರವಾರ ಶಾಸಕ ಟಿ.ವೆಂಕಟರಮಣಯ್ಯ ನಡೆಸಿದ ‘ಜನತಾ ದರ್ಶನ’ದಲ್ಲಿ ನಗರದ ಪ್ರಸನ್ನ ಚಿತ್ರಮಂದಿರದ ನಿವಾಸಿ ವೆಂಕಟಲಕ್ಷಮ್ಮ ಮನವಿ ಸಲ್ಲಿಸಿ,‌ ಡಾ.ರಾಜ್‍ಕುಮಾರ್ ವೃತ್ತದಿಂದ ರಂಗಪ್ಪ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ರಸ್ತೆ ಎರಡು ಬದಿಯಲ್ಲಿ ವಿಸ್ತರಣೆ ಮಾಡದೆ ಒಂದು ಕಡೆ ಮಾತ್ರ ತೆರವು ಕಾರ್ಯ ನಡೆಸಲು ಮುಂದಾಗಿದ್ದಾರೆ. ಇದರಿಂದ ಈ ವ್ಯಾಪ್ತಿಯ ಅನೇಕ ಬಡಜನರು ನಿರಾಶ್ರಿತರಾಗಲಿದ್ದಾರೆ ಎಂದರು.

ಎರಡು ಬದಿಯಲ್ಲಿ ಸಮರ್ಪಕವಾಗಿ ಸರ್ವೇ ಕಾರ್ಯ ನಡೆಸಿ ಬಡಜನರು ನಿರಾಶ್ರಿತರಾಗುವುದನ್ನು ತಡೆಯಬೇಕೆಂದು ಮನವಿ ಮಾಡಿದರು.

ADVERTISEMENT

‌ನಾಲ್ಕನೇ ವಾರ್ಡ್‍ನ ವಿನಾಯಕ ನಗರದಲ್ಲಿ ರಾಜಕಾಲುವೆ ನಿರ್ಮಾಣದಿಂದಾಗಿ ಈ ವ್ಯಾಪ್ತಿಯ 60ಕ್ಕೂ ಹೆಚ್ಚು ಮನೆಗಳಿಗೆ ಸಮರ್ಪಕ ರಸ್ತೆ ಇಲ್ಲವಾಗಿದ್ದು, ತ್ವರಿತವಾಗಿ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸಬೇಕೆಂದು ಸ್ಥಳೀಯ ರಿಜ್ವಾನ್ ಮನವಿ ಮಾಡಿದರು.

ನಗರಸಭೆಗೆ ವಸತಿ ಯೋಜನೆ ನೀಡುವಂತೆ 2002ರಲ್ಲಿ ₹5ಸಾವಿರ ಹಣ ಕಟ್ಟಲಾಗಿದೆ. ಇದುವರೆಗೂ ಮನೆ ನೀಡಿಲ್ಲ. ಈ ಕುರಿತು ಅಕಾರಿಗಳಿಗೆ ಸೂಚನೆ ನೀಡಬೇಕೆಂದು ಇಸ್ಲಾಂಪುರದ ಜಮೃದ್ ಹಾಗೂ ಶಾಂತಿನಗರದ ರಾಮಯ್ಯ ಮನವಿ ಮಾಡಿದರು.

ಕೆಪಿಎಸ್‍ಸಿ ನೇಮಕಾತಿ ಕುರಿತಂತೆ ಎಲ್ಲ ಪ್ರಕ್ರಿಯೆಗಳು ಮುಗಿಸಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ. ಆದರೆ, ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಹೆಸರು ಇಲ್ಲವಾಗಿದೆ ಎಂದು ಅಣಗಲಪುರದ ಚಿಕ್ಕಮಯ್ಯ ಮನವಿ ಸಲ್ಲಿಸಿದರು.

ಖಾಸ್‍ಬಾಗ್ ನಿವಾಸಿ ಚನ್ನಬಸವರಾಜ್ ಮನವಿ ಪತ್ರ ಸಲ್ಲಿಸಿ, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗೆ ಅಂಗಡಿ ನಡೆಸಲು ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ನೆರವು ಸಿಕ್ಕಿಲ್ಲ. ಅಂಗವಿಕಲನಾಗಿ ಜೀವನ ನಡೆಸಲು ಕಷ್ಟವಾಗಿದ್ದು ಸ್ವಂತ ಉದ್ಯೋಗ ನಡೆಸಲು ಯೋಜನೆಯಡಿಯಲ್ಲಿ ಸಾಲ ನೀಡಬೇಕೆಂದು ಮನವಿ ಸಲ್ಲಿಸಿದರು.

ಪೌರಕಾರ್ಮಿಕ ನಾರಾಯಣಸ್ವಾಮಿ ಪತ್ನಿ ಅನುರಾಧಾ ಮನವಿ ಸಲ್ಲಿಸಿ, ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತ ನಿವೇಶನ ಅಥವಾ ವಸತಿ ಗೃಹ ಕಟ್ಟಡದ ಹಂಚಿಕೆಯಲ್ಲಿ ಅರ್ಹರಿಗೆ ಸಿಗುತ್ತಿಲ್ಲ. ಹಣ ನೀಡಿದವರಿಂದ ಮಾತ್ರ ಅರ್ಜಿ ಪಡೆಯುತ್ತಿದ್ದಾರೆ. ಹಣ ನೀಡಿಲ್ಲದ ಕಾರಣ ಅರ್ಜಿ ವಜಾಗೊಳಿಸಲಾಗಿದೆ ಎಂದು ದೂರಿದರು.

ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ಪೌರಾಯುಕ್ತ ಆರ್.ಮಂಜುನಾಥ್, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಅಶೋಕ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.