ADVERTISEMENT

ದೇವನಹಳ್ಳಿ | 'ಪೌರಕಾರ್ಮಿಕರನ್ನು ಗೌರವಿಸುವುದು ಕರ್ತವ್ಯ'

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:27 IST
Last Updated 24 ಸೆಪ್ಟೆಂಬರ್ 2025, 2:27 IST
ವಿಜಯಪುರದ ಪುರಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು
ವಿಜಯಪುರದ ಪುರಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು   

ವಿಜಯಪುರ (ದೇವನಹಳ್ಳಿ): ಇಲ್ಲಿನ ಪುರಸಭಾ ಆವರಣದಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.

ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್ ಮಾತನಾಡಿ, ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಿ ಉನ್ನತ ಹುದ್ದೆಗಳಿಗೆ ಸೇರಲು ಪ್ರೋತ್ಸಾಹಿಸಬೇಕು. ಪೌರ ಕಾರ್ಮಿಕರನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್ ಮಾತನಾಡಿ, ದೇಶ ಕಾಯುವ ಸೈನಿಕರಂತೆ ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರಂತೆ. ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ADVERTISEMENT

ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಸಾರ್ವಜನಿಕರು ಮನೆಯಲ್ಲಿಯೇ ಒಣ ಕಸ, ಹಸಿ ಕಸವನ್ನು ವಿಂಗಡಿಸಿ ಮನೆ ಮುಂದೆ ಬರುವ ಪುರಸಭೆ ವಾಹನಕ್ಕೆ ನೀಡಬೇಕು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ನೀರು ಸರಬರಾಜು ನಿವೃತ್ತ ಸಿಬ್ಬಂದಿ ಮುತ್ಯಾಲಪ್ಪ, ಶಿವಕುಮಾರ್, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರು ರತ್ನ ಪ್ರಶಸ್ತಿ ಪುರಸ್ಕೃತ ಅಂಬರೀಶ್ ಹಾಗೂ ಸಂದ್ಯಾ ದಂಪತಿಯನ್ನು ಸನ್ಮಾನಿಸಲಾಯಿತು.

ಪುರಸಭಾ ಉಪಾಧ್ಯಕ್ಷೆ ತಾಜ್ ವುನ್ನೀಸಾ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಸದಸ್ಯ ಬೈರೇಗೌಡ, ನಂದಕುಮಾರ್, ಕವಿತಾ, ಶಿಲ್ಪ ಅಜಿತ್, ಆಯಿಷಾ ಸೈಫುಲ್ಲಾ, ಪೌರ ಕಾರ್ಮಿಕರ ನೌಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ಲಕ್ಷ್ಮಣ್, ಪುರಸಭಾ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

ಬಹುತೇಕ ಪುರಸಭಾ ಸದಸ್ಯರು ಗೈರು ಪುರಸಭೆಯಿಂದ ನಡೆಯುವ ಬಹುತೇಕ ಜಯಂತಿ ಕಾರ್ಯಕ್ರಮಗಳಿಗೆ ಪುರಸಭಾ ಚುನಾಯಿತ ಸದಸ್ಯರು ಗೈರಾಗುತ್ತಿದ್ದು ಮಂಗಳವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿಯೂ ಬಹುತೇಕ ಚುನಾಯಿತ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸದ ಕಾರಣ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.