ADVERTISEMENT

ವಿಜಯಪುರ: 11 ಪೌರಕಾರ್ಮಿಕರು ಕಾಯಂ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 14:38 IST
Last Updated 13 ಫೆಬ್ರುವರಿ 2024, 14:38 IST
ಕಾಯಂಗೊಂಡ 11 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಪುರಸಭೆ ಅಧ್ಯಕ್ಷೆ ವಿಮಲಾಬಸವರಾಜ್ ಇದ್ದರು
ಕಾಯಂಗೊಂಡ 11 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಪುರಸಭೆ ಅಧ್ಯಕ್ಷೆ ವಿಮಲಾಬಸವರಾಜ್ ಇದ್ದರು   

ವಿಜಯಪುರ(ದೇವನಹಳ್ಳಿ): ಪಟ್ಟಣದ ಪುರಸಭೆಯಲ್ಲಿ ಖಾಲಿಯಿದ್ದ 15 ಮಂದಿ ಪೌರಕಾರ್ಮಿಕರ ಹುದ್ದೆಯಲ್ಲಿ 11 ಮಂದಿ ಪೌರಕಾರ್ಮಿಕರನ್ನು ಸರ್ಕಾರ ಕಾಯಂಗೊಳಿಸಿದ್ದು, ಮಂಗಳವಾರ ಪುರಸಭೆ ಅಧ್ಯಕ್ಷೆ ವಿಮಲಾಬಸವರಾಜ್ ಅವರು ನೇಮಕಾತಿ ಪತ್ರ ವಿತರಿಸಿದರು.

ಕೃಷ್ಣಪ್ಪ, ಡಿ.ಅಣ್ಣಪ್ಪ, ಶಾರದಮ್ಮ, ಕೋಕಿಲ, ಆರ್.ಲಕ್ಷ್ಮಣ, ನಾರಾಯಣಸ್ವಾಮಿ, ಎಂ. ಶಿವ, ಎಂ.ಮಂಜುನಾಥ, ಕೆ.ಮಾರಪ್ಪ, ಪ್ರಸಾದ, ಶಿವ ಕಾಯಂಗೊಂಡವರು. ಇವರು ನೇರಪಾವತಿ, ಕ್ಷೇಮಾಭಿವೃದ್ಧಿ, ದಿನಗೂಲಿ ಗುತ್ತಿಗೆ ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

ಅಧ್ಯಕ್ಷೆ ವಿಮಲಾ ಬಸವರಾಜ್ ಮಾತನಾಡಿ, ಪಟ್ಟಣವನ್ನು ನಿತ್ಯ ಸ್ವಚ್ಛಗೊಳಿಸುವ  ಪೌರಕಾರ್ಮಿಕರು ನೈಜ ಕಾಯಕ ಯೋಗಿಗಳಾಗಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಇವರ ಪಾತ್ರ ಅನನ್ಯ. ಪೌರಕಾರ್ಮಿಕರ ಹಿತಕಾಪಾಡುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.

ADVERTISEMENT

ಮಹಿಳಾ ಕಾರ್ಮಿಕರು ನಿತ್ಯ ಕಾಯಕದ ಜತೆಗೆ ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಿ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಪಾಸಣೆ ಮಾಡಿಕೊಳ್ಳಬೇಕು. ನೀವು ಆರೋಗ್ಯವಾಗಿದ್ದರೆ ಪಟ್ಟಣದ ಸ್ವಚ್ಛವಾಗಿರಲು ಸಾಧ್ಯ ಎಂದರು.

ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮಾತನಾಡಿ, ಕಾಯಂಗೊಂಡಿರುವ ಪೌರಕಾರ್ಮಿಕರ ಕರ್ತವ್ಯ, ಸಮಯಪಾಲನೆ, ಆರೋಗ್ಯ ಸುಧಾರಣೆ ಹಾಗೂ ಸ್ವಚ್ಛತೆಯ ಕುರಿತು ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯತೆ ಮತ್ತು ವಿಶ್ವಾಸವನ್ನು ಇಟ್ಟುಕೊಂಡು ಕೆಲಸ ಮಾಡುವ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಪುರಸಭೆ ಉಪಾಧ್ಯಕ್ಷ ಎಂ.ಕೇಶವಪ್ಪ, ಸದಸ್ಯರಾದ ಭೈರೇಗೌಡ, ಎಂ.ರಾಜಣ್ಣ, ಸಿ.ಎಂ.ರಾಮು, ಶ್ರೀರಾಮಪ್ಪ, ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್, ಎಂಜಿನಿಯರ್ ಶೇಖರ್, ಅನಿಲ್, ಲಿಂಗಣ್ಣ, ಶಿವನಾಗೇಗೌಡ, ಪವನ್ ಜ್ಯೋಷಿ, ಮೇಸ್ತ್ರೀ ನಾಗರಾಜ್, ಜನಾರ್ಧನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.