ದೇವನಹಳ್ಳಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತ ಯತ್ನ ಪ್ರಕರಣ ಖಂಡಿಸಿ ಹಾಗೂ ಶೂ ಎಸೆಯಲು ಯತ್ನಿಸಿದ ವಕೀಲನನ್ನು ಬಂಧಿಸಲು ಆಗ್ರಹಿಸಿ ತಾಲ್ಲೂಕಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಬಟನೆ ನಡೆಯಿತು.
ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಮುಖ್ಯನ್ಯಾಯಮೂರ್ತಿ ಮತ್ತು ಘನ ಸುಪ್ರೀಂ ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲ ರಾಕೇಶ್ ಕಿಶೋರ್ ಅವರನ್ನು ರಾಷ್ಟ್ರವಿರೋಧಿ ಎಂದು ಘೋಷಿಸಿ, ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ಸರ್ವಜನ ಹಿತರಕ್ಷಣೆ ಪ್ರಮುಖವಾಗಿರುವ ಈದೇಶದಲ್ಲಿ ಇಂತಹ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ದಲಿತರ ಮೇಲೆ ಮನುವಾದಿಗಳ ಹಾಗೂ ಜಾತಿವಾದಿಗಳ ದೌರ್ಜನ್ಯ, ಅದರಲ್ಲೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ನೆಡಿದಿದೆ ಎಂದರೇನು ಅರ್ಥ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ, ಗೃಹ ಇಲಾಖೆ ಏನು ಮಾಡುತ್ತಿದೆ. ದಲಿತರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಮ್ಮನಿದ್ದಾಗ ಕೆಲವು ವಿಶೇಷ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ನ್ಯಾಯ ಒದಗಿಸುತಿತ್ತು. ಆದರೇ, ಈಗ ನೆಡೆದ ಘಟನೆಯಿಂದ ಇಡೀ ದೇಶವನನೇ ದಿಗ್ಭ್ರಮೆಗೊಳಿಸಿದೆ ಎಂದು ಅಖಿಲ ಭಾರತ ವಕೀಲರ ಸಂಘದ ಹರೀಂದ್ರ ಹೇಳಿದರು
ಭಾರತೀಯರು ತಲೆತಗ್ಗಿಸಿ ನಾಚಿಕೆ ಪಡುವ ಮತ್ತು ಅಸಹ್ಯ ಹುಟ್ಟಿಸುವ ಕೃತ್ಯ ಇದಾಗಿದೆ. ಯಾವುದೇ ವಿಚಾರದಲ್ಲಿ ಅಭಿಪ್ರಾಯ ಭಿನ್ನಾಭಿಪ್ರಾಯ ಇರಬಹುದು, ಆದರೆ ಅಸಭ್ಯತೆ, ಮತ್ತು ಅಮಾನೀಯ ಸಹಿಸಲು ಸಾಧ್ಯವಿಲ್ಲ. ಇಂತಹ ನಡೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆತರುವ ನಡೆ. ಇಂತಹ ಕೃತ್ಯಗಳು ಸಂವಿಧಾನದ ಕಾನೂನು, ಹಾಗೂ ನ್ಯಾಯಾಂಗದ ವ್ಯವಸ್ಥೆಗೆ ಮಾರಕ ಎಂದು ಎಂದು ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅವರ ಮೂಲಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮುಖಂಡರು ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾ ವಿಮೋಚನಾ ಚಳುವಳಿಯ ರಾಜ್ಯಾಧ್ಯಕ್ಷ ಮುನಿ ಆಂಜಿನಪ್ಪ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಚಂದ್ರ ತೇಜಸ್ವಿ, ವಕೀಲರ ಸಂಘದ ರುದ್ರಾರಾಧ್ಯ, ದಲಿತ ಮುಖಂಡರಾದ ಕುಂದಾಣ ಕೆ.ವಿ ಸ್ವಾಮಿ, ನರಸಿಂಹಯ್ಯ, ಆವತಿ ತಿಮ್ಮರಾಯಪ್ಪ, ಪಿ.ಎಂ ಚಿನ್ನಸ್ವಾಮಿ, ಕೆ.ಆರ್ ಮುನಿಯಪ್ಪ, ನರಸಪ್ಪ, ಮಹೇಶ್ ದಾಸ್, ಕೇಶವ, ಶಂಕರ್, ನಾಗೇಶ್, ಸಂಜೀವ್ ನಾಯಕ್, ಬಿ.ಪಿ ಆಂಜಿನಪ್ಪ ಇದ್ದರು.
ದೇಶದ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಕೃತ್ಯ ಇದಾಗಿದ್ದು ಭವ್ಯ ಭಾರತದ ಉನ್ನತ ದೇವಸ್ಥಾನದ ದೇವರಿಗೆ ಮಾಡಿದ ಅವಮಾನದಂತೆ ಈತನ ನಡೆ ಅತ್ಯಂತ ಖಂಡನೀಯ.–ಹರೀಂದ್ರ ಅಖಿಲ ಭಾರತ ವಕೀಲರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.