ADVERTISEMENT

ರಸ್ತೆ ಬದಿ ಚರಂಡಿ ನಿರ್ಮಾಣಕ್ಕೆ ಒತ್ತಾಯ

ವಿಜಯಪುರ ಅಭಿವೃದ್ಧಿಗೆ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:44 IST
Last Updated 5 ಜುಲೈ 2022, 4:44 IST
ಚರಂಡಿಯೇ ಇಲ್ಲದ ವಿಜಯಪುರದ ದೇವನಹಳ್ಳಿ ಮುಖ್ಯರಸ್ತೆ
ಚರಂಡಿಯೇ ಇಲ್ಲದ ವಿಜಯಪುರದ ದೇವನಹಳ್ಳಿ ಮುಖ್ಯರಸ್ತೆ   

ವಿಜಯಪುರ:ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯ ಪ್ರವಾಸಿ ಮಂದಿರ ಬಳಿಯ ಮೋರಿಯಿಂದ ಹಿಡಿದು ಬಸ್ ನಿಲ್ದಾಣದವರೆಗೂ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಇದರಿಂದ ಮಳೆ ಬಂದರೆ ನೀರು ಪ್ರವಾಸಿ ಮಂದಿರ, ಜೂನಿಯರ್ ಕಾಲೇಜು ಹಾಗೂ ರೇಷ್ಮೆ ಇಲಾಖೆ ಕಚೇರಿಯ ಮುಂಭಾಗ ಹಾಗೂ ಜೂನಿಯರ್ ಕಾಲೇಜಿನ ಮೈದಾನಕ್ಕೆ ನುಗ್ಗುತ್ತಿದೆ.

ಪಟ್ಟಣದ ಪುರಸಭೆಯು ಶತಮಾನ ಕಂಡಿದ್ದರೂ ಇದುವರೆಗೂ ಅಗತ್ಯವಿರುವ ಸ್ಥಳಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಸಾಕಷ್ಟು ವರ್ಷಗಳಿಂದ ಈ ವಿಚಾರ ಪ್ರಸ್ತಾಪ ಮಾಡುತ್ತಿದರೂ ಯಾರೊ ಬ್ಬರೂ ಗಮನಹರಿಸುತ್ತಿಲ್ಲ. ಮಳೆ ಬಂದರೆ ರಸ್ತೆಗಳು ಸಣ್ಣ ಕೆರೆಗಳಾಗಿ ಮಾರ್ಪಡುತ್ತಿವೆ. ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯಾಗಬೇಕು. ಮುಖ್ಯರಸ್ತೆಯ ಎರಡು ಕಡೆಯ ಇಕ್ಕೆಲಗಳಲ್ಲಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ವಿ. ಮಂಜುನಾಥ್ಒತ್ತಾಯಿಸಿದರು.

ಮುಖಂಡ ನಾಗರಾಜ್ ಮಾತನಾಡಿ, ಮುಖ್ಯರಸ್ತೆಯಲ್ಲಿ ಬೀದಿದೀಪ ಅಳವಡಿಸಲು ಪುರಸಭೆ ಆಡಳಿತ ಕ್ರಮಕೈಗೊಳ್ಳಬೇಕು. ರಾತ್ರಿ ವೇಳೆ ಮುಖ್ಯರಸ್ತೆಯಲ್ಲೂ ಕಷ್ಟಪಟ್ಟು ಮನೆಗಳಿಗೆ ತೆರಳುವಂತಹ ಪರಿಸ್ಥಿತಿಯಿದೆ. ಇದ ರಿಂದ ಅಪರಾಧ ಕೃತ್ಯಗಳು ನಡೆ ಯುತ್ತಿವೆ. ಜನರು ಪುರಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಿ ಒಂದು ವರ್ಷವಾದರೂ ಪಟ್ಟಣದಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಕ್ಕಿಲ್ಲ ಎಂದು ದೂರಿದರು.

ADVERTISEMENT

ಶತಮಾನೋತ್ಸವ ಆಚರಣೆಗೆ ಒತ್ತಾಯ: ಪಟ್ಟಣದ ಪುರಸಭೆಗೆ ನೂರು ವರ್ಷ ತುಂಬಿದ್ದರೂ ಇದುವರೆಗೂ ಶತಮಾನೋತ್ಸವ ಆಚರಣೆ ಮಾಡಿಲ್ಲ. ‌

ಪೌರಾಡಳಿತ ಸಚಿವರು ಜಿಲ್ಲೆಯವರಾಗಿದ್ದರೂ ಇಲ್ಲಿ ಆಡಳಿತ ನಡೆಸುತ್ತಿರುವವರು, ಸಚಿವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಶತಮಾನೋತ್ಸವಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ರಾಗಲಿ, ಶಾಸಕರಾಗಲಿ ಪುರಸಭೆಯಲ್ಲಿ ಇದುವರೆಗೂ ಸಭೆ ಕರೆದು ಇಲ್ಲಿನ ಅಭಿವೃದ್ಧಿ ಕುರಿತು ಮಾಹಿತಿ ಪಡೆದು ಕೊಂಡಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದರು.

‘ಡಾ.ಕೆ. ಸುಧಾಕರ್ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಗ್ಗೆ ಇರುವಷ್ಟು ಕಾಳಜಿ ಗ್ರಾಮಾಂತರ ಜಿಲ್ಲೆಯ ಮೇಲಿಲ್ಲ. ಅವರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ತೋರಿಸುತ್ತಿರುವ ಕಾಳಜಿಯನ್ನು ಪಟ್ಟಣದ ಅಭಿವೃದ್ಧಿಗೆ ತೋರಿಸುತ್ತಿಲ್ಲ’ ಎಂದು ಮುಖಂಡ ಕೋಕೊ ಕೋಲಾ ಮಂಜುನಾಥ್ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.