ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರ ಮಾಡಲಾಗಿದೆ. ತರಬೇತಿ, ಸಂಬಳ, ಸೌಲಭ್ಯಗಳನ್ನು ನೀಡುವ ಮೂಲಕ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ತರಗತಿಗಳು ನಡೆಸಬೇಕು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಹೇಳಿದರು.
ಅವರು ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಮೇ 17 ರಂದು ಆದೇಶ ಹೊರಡಿಸುವ ಮೂಲಕ ಎಲ್‌ಕೆಜಿ ತರಗತಿಗಳನ್ನು ಸರ್ಕಾರಿ ಶಾಲೆಯಲ್ಲಿಯೇ ನಡೆಸಲು ಸೂಚನೆ ನೀಡಿದೆ. ಮೂರುವರೆ ವರ್ಷದಿಂದ ಆರು ವರ್ಷದ ಒಳಗಿನ ಮಕ್ಕಳೇ ಅಂಗನವಾಡಿಗೆ ಬರುತ್ತಾರೆ. ಇದೇ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿಕೊಂಡರೆ ಅಂಗನವಾಡಿ ಕೇಂದ್ರಗಳು ಮುಚ್ಚಲಿವೆ ಎಂದು ದೂರಿದರು.
ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕಿರುವ ಕೆಲಸವನ್ನು ಕಸಿದುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿರುವ 6 ಸಾವಿರ ಅಂಗನವಾಡಿ ಕೇಂದ್ರಗಳು ಬರಿ ಸರ್ಕಾರದ ಇತರೆ ಕೆಲಸಗಳು ಹಾಗೂ ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕೆ ಮಾತ್ರ ಸೀಮಿತವಾಗುವಂತೆ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ 2011 ರಿಂದಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
‘ಇಷ್ಟು ದಿನಗಳ ಕಾಲ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲಾಗುತ್ತಿತ್ತು. ಆದರೆ ಈಗ ಅಂಗನವಾಡಿ ಕೇಂದ್ರಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುವಂತಹ ಸ್ಥಿತಿ ಬಂದಿದೆ. 2017ರಲ್ಲಿ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದ್ದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೋರಾಟವನ್ನು ಬೆಂಬಲಿಸಿ ನಮ್ಮ ನ್ಯಾಯಾಯುತ ಬೇಡಿಕೆಗಳ ಈಡೇರಿಕೆಗೆ ಬೆಂಬಲ ಸೂಚಿಸಿದ್ದರು. ಆದರೆ ಈಗ ಅವರೇ ಮುಖ್ಯಮಂತ್ರಿಗಳಾಗಿದ್ದರೂ ನಮ್ಮ ಬೇಡಿಕೆಗಳ ಈಡೇರಿಕೆ ಇರಲಿ, ಕನಿಷ್ಠ ನಮ್ಮ ಸಮಸ್ಯೆಗಳ ಕುರಿತು ನಮ್ಮೊಂದಿಗೆ ಒಂದು ಸಭೆಯನ್ನು ನಡೆಸಲು ಸಮಯ ನೀಡದೆ ಇರುವುದಕ್ಕೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದರು.
‘ಅಂಗನವಾಡಿ ಕಾರ್ಯಕರ್ತೆಯರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿರುವವರೆಗೂ ಒಂದೇ ರೀತಿಯ ಸಂಬಳ, ಇಂದು ಉದ್ಯೋಗಕ್ಕೆ ಸೇರುವವರಿಗೂ ಒಂದೇ ರೀತಿಯ ಸಂಬಳ. ಸೇವಾ ಹಿರಿತಕ್ಕೆ ಇಲ್ಲಿ ಗೌರವವೇ ಇಲ್ಲದಾಗಿದೆ. ನಮ್ಮ ಸಂಬಳದಲ್ಲಿ ಶೇ10ರಷ್ಟು ಹಣವನ್ನು ಸರ್ಕಾರವೇ ಕಡಿತ ಮಾಡಿಕೊಳ್ಳುವ ಮೂಲಕ ನಿವೃತ್ತಿ ಸಮಯದಲ್ಲಿ ಒಟ್ಟಾಗಿ ನೀಡುವ ಹಾಗೂ ನಿವೃತ್ತಿ ವೇತನ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಒತ್ತಾಯಿಸಿದರು.
ಮೇಲ್ವಿಚಾರಕಿಯರಾಗಿ ಬಡ್ತಿ ನೀಡುವಾಗ ಅಂಗನವಾಡಿ ಕಾರ್ಯಕರ್ತೆಯರನ್ನೇ ಪರಿಗಣಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಅಂಗನವಾಡಿ ಕಾರ್ಯಕರ್ತೆಯರ ವಿರುದ್ದ ತನಿಖೆ ನಡೆಸುವ, ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಇರಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕಾಯುಕ್ತರಿಗೆ ಈ ಅಧಿಕಾರ ನೀಡುವುದು ಸರಿಯಲ್ಲ ಎಂದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಆರ್. ನಳಿನಾಕ್ಷಿ, ತಾಲ್ಲೂಕು ಘಟಕದ ಅಧ್ಯಕ್ಷೆ ಟಿ.ಡಿ. ಮಂಜುಳಾ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುಮಾ, ಖಜಾಂಚಿ ನಿರ್ಮಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.