ADVERTISEMENT

ದಲಿತರ ಮೇಲೆ ಹಲ್ಲೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 13:31 IST
Last Updated 22 ಜುಲೈ 2019, 13:31 IST
ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಟಿ.ಭರತ್ ಹಾಗೂ ಮುಖಂಡರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್ ನಂದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಟಿ.ಭರತ್ ಹಾಗೂ ಮುಖಂಡರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್ ನಂದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ವಿಜಯಪುರ: ‘ಕಠಿಣವಾದ ಕಾನೂನುಗಳು ರೂಪುಗೊಂಡಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ’ ಎಂದು ಕರ್ನಾಟಕ ದಲಿತ ಜನಸೇನೆ ರಾಜ್ಯ ಘಟಕದ ಅಧ್ಯಕ್ಷ ಟಿ.ಭರತ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿ ಗ್ರಾಮದಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿ ಅವರ ಕುಟುಂಬದವರ ಮೇಲೆ ನಡೆದಿರುವ ಹಲ್ಲೆ ಪ್ರಕರಣದ ಕುರಿತು, ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸಬ್‌ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಹಳ್ಳಿಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಹೋಬಳಿಯಲ್ಲಿ ಹಲವಾರು ಬಾರಿ ಇಂತಹ ಘಟನೆಗಳು ನಡೆದಿವೆ. ಆದರೂ ಸರ್ಕಾರ, ಪೊಲೀಸ್ ಇಲಾಖೆ ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ’ ಎಂದರು.

ADVERTISEMENT

‘ಚೀಮಾಚನಹಳ್ಳಿ ಗ್ರಾಮದಲ್ಲಿ ದಲಿತ ಮುಖಂಡನನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಈ ವಿಚಾರದಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದರೆ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯಲು ಅವಕಾಶವಾಗುತ್ತದೆ. ಆದ್ದರಿಂದ ಸೂಕ್ತಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಬ್‌ ಇನ್‌ಸ್ಪೆಕ್ಟರ್ ನಂದೀಶ್ ಮಾತನಾಡಿ, ‘ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿರುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಒಬ್ಬರನ್ನು ಬಂಧಿಸಿದ್ದೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಉಳಿದವರ ಬಂಧನಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಜನರಿಗೂ ರಕ್ಷಣೆ ನೀಡಲು ಇಲಾಖೆ ಬದ್ಧವಾಗಿದೆ’ ಎಂದರು.

ಕಾರ್ಯಾಧ್ಯಕ್ಷ ಕೆ.ಜಿ.ಮಂಜುನಾಥ , ಪ್ರಧಾನ ಕಾರ್ಯದರ್ಶಿ ಮಧುಸೂಧನ್, ಉಪಾಧ್ಯಕ್ಷರಾದ ದರ್ಶನ್, ಶ್ರೀಧರ್, ಖಜಾಂಚಿ ಸುರೇಶ್, ತಾಲ್ಲೂಕು ಅಧ್ಯಕ್ಷ ಪ್ರಭು, ಸಂಚಾಲಕ ಲೋಕೇಶ್, ಪ್ರವೀಣ್, ನಾರಾಯಣ, ಕೇಶವ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.