ADVERTISEMENT

ಕಾರ್ಮಿಕ ವಿರೋಧಿ ನೀತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 2:35 IST
Last Updated 10 ಆಗಸ್ಟ್ 2021, 2:35 IST
ಹೊಸಕೋಟೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ ವಿರುದ್ಧದ ಪ್ರತಿಭಟನಾ ಮೆರವಣಿಗೆ ಬಳಿಕ ತಹಶೀಲ್ದಾರ್‌ ಗೀತಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಹೊಸಕೋಟೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ ವಿರುದ್ಧದ ಪ್ರತಿಭಟನಾ ಮೆರವಣಿಗೆ ಬಳಿಕ ತಹಶೀಲ್ದಾರ್‌ ಗೀತಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು   

ಹೊಸಕೋಟೆ: ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಆಗಿನ ದೇಶಭಕ್ತರು ಚಳವಳಿ ನಡೆಸಿದ್ದರು. ಈಗ ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂದು ಹೋರಾಟ ಮಾಡಬೇಕಾಗಿದೆ ಎಂದು ತಾಲ್ಲೂಕು ಸಿಐಟಿಯು ಅಧ್ಯಕ್ಷ ವಕೀಲ ಹರೀಂದ್ರ ತಿಳಿಸಿದರು.

ನಗರದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೆನಪಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ರೈತಮತ್ತು ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರ ಅಧಿಕಾರ ನಡೆಸುತ್ತಿದೆ. ಸರ್ಕಾರಿ ಕಂಪನಿಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆ ಈಡೇರಿಸಿಲ್ಲ. ಎಲ್‌ಐಸಿಯನ್ನೂ ಖಾಸಗೀಕರಣಗೊಳಿಸಲು ಕೇಂದ್ರ ಮುಂದಾಗಿದೆ ಎಂದು ಆರೋಪಿಸಿದರು.

ADVERTISEMENT

ಬೆಂಗಾಲ್ ಲ್ಯಾಂಪ್ಸ್ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಕ್ಯಾಸೆಟ್ ನಾಗರಾಜ್ ಮಾತನಾಡಿ, ಕಳೆದ 32 ವರ್ಷಗಳಿಂದ ಕಾರ್ಖಾನೆಯನ್ನು ಮುಚ್ಚಿ ಮಾಲೀಕರು ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಾರ್ಖಾನೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಾರ್ಮಿಕರ ಹಿತಾಸಕ್ತಿ ಕಾಪಾಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈಗ ಸರ್ಕಾರದ ಗಮನಕ್ಕೂ ತರಲಾಗುತ್ತಿದೆ ಎಂದು ಹೇಳಿದರು.

ಕಾರ್ಮಿಕ ಸಚಿವರು ತಕ್ಷಣ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಸಂಘಟನೆಯ ರಾಜ್ಯ ಮುಖಂಡ ಮನೋಹರ್‌, ತಾಲ್ಲೂಕು ಕಾರ್ಯದರ್ಶಿ ಮೋಹನ್ ಬಾಬು ಮಾತನಾಡಿದರು. ಬೆಂಗಾಲ್ ಲ್ಯಾಂಪ್ಸ್ ಕಾರ್ಖಾನೆಯ ಕಾರ್ಮಿಕ ಸಂಘದ ಕಾರ್ಯದರ್ಶಿ ಅಬ್ದುಲ್ಲಾ ಸಾಬ್ ಸೇರಿದಂತೆ ಇತರೇ ಪದಾಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರುಭಾಗವಹಿಸಿದ್ದರು.

ತಹಶೀಲ್ದಾರ್‌ ಗೀತಾ ಮನವಿ ಪತ್ರ ಸ್ವೀಕರಿಸಿದರು.

ಇದಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.