ADVERTISEMENT

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಆನೇಕಲ್: ಸಕ್ಕರೆ ಅಕ್ರಮ ಪ್ರಕರಣ ಆರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2020, 17:20 IST
Last Updated 5 ಮೇ 2020, 17:20 IST
ಸರ್ಜಾಪುರ ಸಕ್ಕರೆ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಆನೇಕಲ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಸರ್ಜಾಪುರ ಸಕ್ಕರೆ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಆನೇಕಲ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಆನೇಕಲ್: ಸರ್ಜಾಪುರದ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕ ಘಟಕದಲ್ಲಿ ಬಿಜೆಪಿ ಮುಖಂಡರ ಮೇಲಿನ ಸಕ್ಕರೆ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಿಡಿಪಿಓ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ.

ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಕೃಷ್ಣಪ್ಪ ತಿಳಿಸಿದರು.

ಅವರು ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ADVERTISEMENT

‘ಸರ್ಜಾಪುರದ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕದಿಂದ ಅಂಗನವಾಡಿಗಳಿಗೆ ಪೂರೈಕೆ ಮಾಡಲು ನೀಡಲಾಗಿದ್ದ ಆಹಾರ ಧಾನ್ಯಗಳ ಪೊಟ್ಟಣಗಳ ಮೇಲೆ ಬಿಜೆಪಿ ಚಿಹ್ನೆ ಬಳಸಿ, ಬಿಜೆಪಿ ಮುಖಂಡರ ಹೆಸರಿನಲ್ಲಿ ರೀಪ್ಯಾಕಿಂಗ್‌ ಮಾಡಿರುವ ಆರೋಪದ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಆರೋಪಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರ ಶಾಸಕ ಅರವಿಂದ ಲಿಂಬಾವಳಿ ಅವರು ಇಸ್ಕಾನ್‌ ವತಿಯಿಂದ ನೀಡಲಾಗಿದ್ದ ಆಹಾರದ ಕಿಟ್‌ಗಳಿಗೆ ತಮ್ಮ ಭಾವಚಿತ್ರ ಹಾಕಿಕೊಂಡು ಜನರಿಗೆ ಹಂಚುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸಲಾಗುವುದು’ ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ‘ಸರ್ಜಾಪುರ ಸಕ್ಕರೆ ಅವ್ಯವಹಾರದ ಸಂಬಂಧ ಬಿಜೆಪಿ ಮುಖಂಡ ಸಿ.ಮುನಿರಾಜು ಅವರನ್ನು ಕೂಡಲೇ ಬಂಧಿಸಬೇಕು. ಪಾರದರ್ಶಕವಾಗಿ ತನಿಖೆ ನಡೆಯಬೇಕು. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಹಾಗಾಗಿ ಸರ್ಕಾರ ತಾರತಮ್ಯ ಮಾಡದೇ ತಪ್ಪು ಮಾಡಿರುವವರ ವಿರುದ್ದ ನ್ಯಾಯಯುತವಾಗಿ ಕ್ರಮ ಜರುಗಿಸಬೇಕು. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ರಾಜಣ್ಣ, ಚಂದ್ರಪ್ಪ, ಟೌನ್ ಕಾಂಗ್ರೆಸ್‌ ಅಧ್ಯಕ್ಷ ಜಿ.ಗೋಪಾಲ್, ಪುರಸಭಾ ಸದಸ್ಯರಾದ ಎನ್‌.ಎಸ್‌.ಪದ್ಮನಾಭ್‌, ಮುನಾವರ್, ರವಿಚೇತನ್, ಮಹಾಂತೇಶ್‌, ಭಾರತಿ, ಭುವನ ದಿನೇಶ್, ಗಂಗಾಧರ್‌, ರವಿ, ರಾಜಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಂಕರರೆಡ್ಡಿ, ಪುಷ್ಪರಾಜು, ಆನಂದ್‌ಕುಮಾರ್, ಮುಖಂಡರಾದ ಬಿ.ಪಿ.ರಮೇಶ್, ದೊಡ್ಡಹಾಗಡೆ ಹರೀಶ್‌, ಸ್ವಾತೇಗೌಡ, ಸರ್ಜಾಪುರ ಶ್ರೀರಾಮ್, ನಾಗವೇಣಿ, ಮುರಳಿ, ಬನಹಳ್ಳಿ ರಾಮಚಂದ್ರರೆಡ್ಡಿ, ಶೈಲೇಂದ್ರಕುಮಾರ್‌, ಅರೇಹಳ್ಳಿ ಮಧು, ಲಕ್ಷ್ಮೀನಾರಾಯಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.