ADVERTISEMENT

‘ಜಿ.ಪಂ, ತಾ.ಪಂ ಕ್ಷೇತ್ರ ವಿಂಗಡಣೆ ಅವೈಜ್ಞಾನಿಕ’

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 2:58 IST
Last Updated 9 ಸೆಪ್ಟೆಂಬರ್ 2022, 2:58 IST
ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವಿಂಗಡಣೆ ನಕ್ಷೆ
ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವಿಂಗಡಣೆ ನಕ್ಷೆ   

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯಿಂದ ಇತ್ತೀಚೆಗೆ ಹೊಸದಾಗಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರ ವಿಂಗಡಣೆ ಮಾಡಲಾಗಿದ್ದು, ಒಟ್ಟು 5 ಜಿ.ಪಂ ಹಾಗೂ 15 ತಾ.ಪಂ ಕ್ಷೇತ್ರಗಳನ್ನು ಪ್ರಕಟಿಸಲಾಗಿದೆ.

ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡ ಎಚ್‌.ಎಂ. ರವಿಕುಮಾರ್‌, ‘ಈ ಪೈಕಿ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶವನ್ನು ಕಾರಹಳ್ಳಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದು ಅವೈಜ್ಞಾನಿಕ. ಯಾವ ಮಾನದಂಡ ಆಧರಿಸಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಯಿರಾ ಗ್ರಾಮ ಪಂಚಾಯಿತಿಗೆ ವಿಶ್ವನಾಥಪುರ ಕೇವಲ 3-4 ಕಿ.ಮೀ ದೂರದಲ್ಲಿದೆ. ಆದರೆ, ಕಾರಹಳ್ಳಿ ಕ್ಷೇತ್ರವೂ 10 ಕಿ.ಮೀಗೂ ಹೆಚ್ಚಿನ ದೂರದಲ್ಲಿದೆ. ಇದರಿಂದ ತಾ.ಪಂ. ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ರಾಜಕೀಯ ಪಟ್ಟಭದ್ರರ ಕೈವಾಡದಿಂದ ಇಂತಹ ಕೆಲಸಕ್ಕೆ ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಇದೇ ರೀತಿಯಲ್ಲಿ ಕೊಯಿರಾವನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗಾಗಿ ಆವತಿ ಕ್ಷೇತ್ರಕ್ಕೆ ಸೇರಿಸಲಾಗಿದೆ. ಇದೊಂದು ರೀತಿ ಕೊಯಿರಾ ಭಾಗವನ್ನು ರಾಜಕೀಯ ಬಲವಿಲ್ಲದೆ ಅನಾಥವನ್ನಾಗಿ ಮಾಡುವ ಷಡ್ಯಂತ್ರವಾಗಿದೆ ಎಂದು ದೂರಿದರು.

ಅವೈಜ್ಞಾನಿಕವಾಗಿ ಕ್ಷೇತ್ರ ವಿಂಗಡಣೆ ಕುರಿತು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.