ADVERTISEMENT

‘ನಾಗರಬಾವಿ ಅಭಿವೃದ್ಧಿಗೆ ಸಹಕರಿಸಿ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 13:02 IST
Last Updated 1 ಅಕ್ಟೋಬರ್ 2019, 13:02 IST
ವಿಜಯಪುರದ ನಾಗರಬಾವಿಯಲ್ಲಿ ಹೂಳು ತೆಗೆದ ನಂತರ ಅಭಿವೃದ್ಧಿಯಿಂದ ವಂಚಿತವಾಗಿ ಗಿಡಗಂಟಿಗಳು ಪುನಃ ಬೆಳೆಯುತ್ತಿವೆ
ವಿಜಯಪುರದ ನಾಗರಬಾವಿಯಲ್ಲಿ ಹೂಳು ತೆಗೆದ ನಂತರ ಅಭಿವೃದ್ಧಿಯಿಂದ ವಂಚಿತವಾಗಿ ಗಿಡಗಂಟಿಗಳು ಪುನಃ ಬೆಳೆಯುತ್ತಿವೆ   

ವಿಜಯಪುರ: ಇಲ್ಲಿನ ನಾಗರಬಾವಿಯನ್ನು ಅಭಿವೃದ್ಧಿ ಪಡಿಸಲಿಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಬದಲಾವಣೆ ಮಾಡಿ ಬೇರೆ ಕಾಮಗಾರಿಗೆ ಬಳಕೆ ಮಾಡಿಕೊಂಡಿರುವುದರಿಂದ ನಾಗರಬಾವಿ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ಆರೋಪಿಸಿದರು.

ಇಲ್ಲಿನ ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ಪುರಾತನ ನಾಗರಬಾವಿಯನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಕೆಲ ಸಂಘ ಸಂಸ್ಥೆಗಳು ಮುಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಲ್ಲಿ ತುಂಬಿಕೊಂಡಿದ್ದ ಹೂಳು ತೆಗೆಸಿದ್ದಾರೆ ಎಂದರು.

ಶಾಸಕರ ಅನುದಾನದಲ್ಲಿ ₹ 20 ಲಕ್ಷ ಮೀಸಲಿಟ್ಟು ನಾಗರಬಾವಿಯನ್ನು ಅಭಿವೃದ್ಧಿಪಡಿಸಿ ಸುತ್ತಲೂ ಉದ್ಯಾನ ನಿರ್ಮಾಣ ಮಾಡಿ, ಪ್ರವಾಸಿತಾಣವಾಗಿ ಮಾರ್ಪಡಿಸಲಾಗುತ್ತದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಭರವಸೆ ನೀಡಿದ್ದರು. ಅನುದಾನ ಮೀಸಲಿಟ್ಟಿರುವುದಾಗಿಯೂ ಹೇಳಿದ್ದರು. ನೀರಾವರಿ ತಜ್ಞರು ಬಾವಿಯನ್ನು ಪರಿಶೀಲಿಸಿ ಅಭಿವೃದ್ಧಿಗೆ ಪೂರಕವಾಗಿದ್ದ ಸಲಹೆ ನೀಡಿದ್ದರು. ಅದರಂತೆ ನೀಲನಕ್ಷೆ ತಯಾರಿಸಿಕೊಂಡಿದ್ದೆವು. ಈಗ ಅನುದಾನ ಬೇರೆ ಕಾಮಗಾರಿಗೆ ಬದಲಾವಣೆ ಮಾಡಿದ್ದಾರೆ ಎಂದು ಟೀಕಿಸಿದರು.

ADVERTISEMENT

ನಿವೃತ್ತ ಮುಖ್ಯಾಧಿಕಾರಿ ಶಿವಕುಮಾರ್ ಮಾತನಾಡಿ, ‘ಪಟ್ಟಣದ ಸುತ್ತಲಿನ ಜಲಮೂಲಗಳನ್ನು ಮೊದಲು ಸಂರಕ್ಷಣೆ ಮಾಡುವುದರಿಂದ ಅಂತರ್ಜಲದ ಮಟ್ಟ ವೃದ್ಧಿಯಾಗಿ ನೀರಿನ ಅಭಾವವನ್ನು ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಜನಪ್ರತಿನಿಧಿಗಳಷ್ಟೇ ಅಲ್ಲದೆ, ಸ್ಥಳೀಯರ ಭಾಗವಹಿಸುವಿಕೆಯೂ ಮುಖ್ಯವಾಗಿರುತ್ತದೆ’ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ನಾಗರಬಾವಿಯ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಹೇಳಿದ್ದು ನಿಜ. ಕಾರಣಾಂತರಗಳಿಂದ ಅನುದಾನ ಬೇರೆ ಕಡೆ ಕ್ರಿಯಾಯೋಜನೆಗೆ ಸೇರಿಸಿದ್ದು, ಪಟ್ಟಣದ ಅಭಿವೃದ್ಧಿಯ ಜೊತೆಗೆ ಜಲಮೂಲಗಳನ್ನು ಸಂರಕ್ಷಣೆ ಮಾಡಲಿಕ್ಕೆ ಬದ್ಧನಾಗಿದ್ದೇನೆ. ವಿಭಿನ್ನವಾಗಿ ಅಭಿವೃದ್ಧಿ ಪಡಿಸಲಿಕ್ಕೆ ತಯಾರಿ ಮಾಡಲಾಗುತ್ತದೆ. ಸ್ಥಳೀಯರ ಸಹಕಾರವೂ ಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.