
ದೇವನಹಳ್ಳಿ: ಸಹಕಾರ ಸಂಘಗಳು ರೈತರಿಗೆ ಕಾಲಕಾಲಕ್ಕೆ ಸಾಲ ಸೌಲಭ್ಯ ನೀಡಿ ರೈತರ ಬೆನ್ನೆಲುಬಾಗಿ ನಿಂತಿವೆ. ಸಹಕಾರ ಸಂಸ್ಥೆಗಳು ಬೆಳೆಯುವುದರಿಂದ ರೈತರ ಬದುಕು ಸುಧಾರಣೆಗೊಳ್ಳುತ್ತದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳಿಂದ ರೈತರ ಅಭಿವೃದ್ಧಿ ಸಾಧ್ಯ, ಪಹಣಿ ಇದ್ದರೆ ಸಾಕು ₹3 ಲಕ್ಷ ವರೆಗೆ ಸಾಲ ಪಡೆಯಬಹುದು. ಜಿಲ್ಲೆಯ ಸಹಕಾರ ಸಂಘಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಪಿ.ಮುನಿರಾಜು, ಸಹಕಾರ ಕ್ಷೇತ್ರದಲ್ಲಿ ಗುಡಿ ಕೈಗಾರಿಕೆಗಳಿಂದ ಹಿಡಿದು ಬೃಹತ್ ಕೈಗಾರಿಕೆ ಸ್ಥಾಪಿಸಲು ಅವಕಾಶವಿದೆ. ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿ ಕೃಷಿ ಉತ್ಪನ್ನಗಳು ಹಾಗೂ ಹೈನೋದ್ಯಮವನ್ನು ಪ್ರೋತ್ಸಾಹಿಸುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಹಿರಿದು ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ವಿ.ಪ್ರಸನ್ನ ಕುಮಾರ್ ಅವರನ್ನು ಸತ್ಕರಿಸಲಾಯಿತು.
ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಮುನಿರಾಮು, ಉಪಾಧ್ಯಕ್ಷ ಕಾರಹಳ್ಳಿ ಜಯರಾಂ, ನಿರ್ದೇಶಕ ವಿ.ಮುನಿರಾಜು, ಹಿತ್ತರಹಳ್ಳಿ ರಮೇಶ್, ಸಹಕಾರ ಇಲಾಖೆಯ ಉಪನಿಬಂಧಕ ಚಂದ್ರಶೇಖರ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.