ADVERTISEMENT

ರಜೆಯ ಮಜಾ ಕಸಿದುಕೊಂಡ ಕೊರೊನಾ

ಮೊಬೈಲ್‌ ಮಂತ್ರದಂಡಕ್ಕೆ ಜೋತು ಬಿದ್ದ ಮಕ್ಕಳು * ಸಂಬಂಧಗಳ ಕೊಂಡಿ ಸಡಿಲ

ನಟರಾಜ ನಾಗಸಂದ್ರ
Published 18 ಏಪ್ರಿಲ್ 2020, 19:45 IST
Last Updated 18 ಏಪ್ರಿಲ್ 2020, 19:45 IST
ಅಚ್ಚಂಡಿ ಕಲ್ಲು ಆಟದಲ್ಲಿ ನಿರತ ಮಕ್ಕಳು
ಅಚ್ಚಂಡಿ ಕಲ್ಲು ಆಟದಲ್ಲಿ ನಿರತ ಮಕ್ಕಳು   

ದೊಡ್ಡಬಳ್ಳಾಪುರ: ಮೊಬೈಲ್‌ ಎಂಬ ಮಂತ್ರದಂಡ ಎಲ್ಲವನ್ನು ಕಲಿಸುತ್ತದೆ ಎನ್ನುವ ಸ್ಥಿತಿಯಲ್ಲಿರುವ ಇಂದಿನ ಪೋಷಕರು ಹಾಗೂ ಮಕ್ಕಳಿಗೆ ಗ್ರಾಮೀಣ ಜೀವನದ ಸೊಗಡಾಗಲಿ, ಶೈಲಿಯಾಗಲಿ ಪರಿಚಯವಿಲ್ಲದ ಒಂದು ಪ್ರಪಂಚದಲ್ಲಿ ಸಿಲುಕಿದ್ದಾರೆ.

ಎಲ್ಲದಕ್ಕೂ ಗೂಗಲ್‌ ನೋಡುತ್ತಾ ಕಾಲಕಳೆಯುವಂತಾಗಿದೆ. ಅದರಲ್ಲೂ ಲಾಕ್‌ಡೌನ್‌ ಹಳೆಯ ನೆನಪುಗಳನ್ನು ಫೇಸ್‌ಬುಕ್‌ನಂತೆ ಮತ್ತೆ ಮತ್ತೆ ನೆನಪಿಸುತ್ತಿದೆ. ಆದರೆ, ವಾಸ್ತವದಲ್ಲಿ ಯಾವುದೂ ಲಭ್ಯವಿಲ್ಲದಾಗಿದೆ. ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಮಕ್ಕಳಿಗೆ ವರ್ಷಕ್ಕೆ ಸಿಗುತ್ತಿದ್ದ ಅಜ್ಜ – ಅಜ್ಜಿಯ ಮನೆಯಲ್ಲಿ ರಜೆ ಕಳೆಯುತ್ತಾ ಗ್ರಾಮೀಣ ಆಟಗಳನ್ನು ಆಡುತ್ತಾ ಕಾಲ ಕಳೆಯುವ ಸೌಭಾಗ್ಯವನ್ನು ಲಾಕ್‌ಡೌನ್‌ ಕಸಿದುಕೊಂಡಿದೆ.

ಮಕ್ಕಳು ಅತ್ತರೇ ಲಾಲಿ ಹಾಡು ಹಾಡುತ್ತಿದ್ದ ಪೋಷಕರು ಈಗ ಯೂಟ್ಯೂಬ್‌ನಲ್ಲಿ ಮಕ್ಕಳ ಗೀತೆ, ಕಾರ್ಟೂನ್‌ಗಳನ್ನು ಹಾಕಿ ಊಟ ಮಾಡಿಸುವವರೇ ಜಾಸ್ತಿಯಾಗಿದ್ದಾರೆ. ಇಷ್ಟೆಲ್ಲಾ ಆಧುನಿಕತೆಯಲ್ಲೂ ಇಂದಿಗೂ ನಗರದಿಂದ ಒಂದಿಷ್ಟು ದೂರದ ಗ್ರಾಮೀಣ ಭಾಗಕ್ಕೆ ಹೋಗಿ ನೋಡಿದರೆ ಬೇಸಿಗೆಯಲ್ಲಿ ಊರ ಹೊರಗಿನ ಗುಂಡುತೋಪು, ಮಾವಿನತೋಪು, ತೋಟದ ಬಾವಿಗಳು...ಹೀಗೆ ಬಹುತೇಕ ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೂ ಕಣ್ಮರೆ ಆಗಿರುತ್ತಾರೆ. ಚಿನ್ನಿದಾಂಡು, ಲಗ್ಗೋರಿ, ಅಚ್ಚಂಡಿಕಲ್ಲು, ಕುಂಟೊಬಿಲ್ಲೆ, ಈಜು... ಹೀಗೆ ಆಟದ ಲೋಕವೇ ಮಕ್ಕಳ ಜಗತ್ತನ್ನು ಆವರಿಸಿಕೊಂಡಿರುತ್ತದೆ.

ADVERTISEMENT

ಈಗ ಕಾಲ ಬದಲಾಗಿದೆ. ಜೀವನ ಶೈಲಿ ಕೂಡ ಬದಲಾಗುತ್ತಿದೆ. ಚಿತ್ರಮಂದಿರ, ಕಂಪ್ಯೂಟರ್‌, ವಿಡಿಯೊಗೇಮ್‌ ಪಾರ್ಲರ್‌, ಟಿವಿಗಳ ಮುಂದೆ ಮಕ್ಕಳು ಠಿಕಾಣಿ ಹೂಡುತ್ತಿದ್ದಾರೆ. ಮೊಬೈಲ್‌ ಎಂಬ ಮಂತ್ರದಂಡವೇ ಮಕ್ಕಳ ಬಾಲ್ಯದ ಸಖನಾಗಿದ್ದಾನೆ. ಇನ್ನೂ ಗ್ರಾಮೀಣ ಆಟ –ಪಾಠಗಳ ಬಗ್ಗೆ ಪೋಷಕರಿಗೆ ಆಸಕ್ತಿಯೂ ಇಲ್ಲ. ಅರಿವೂ ಇಲ್ಲ. ಹಾಗಾಗಿ ಇ-ಕಲಿಕೆಯ ಮುಂದೆ ಆ-ಕಲಿಕೆ ಕಣ್ಮರೆಯಾಗುತ್ತಿದೆ ಎಂದು ಪೋಷಕ ಜಿ.ರಾಜಶೇಖರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಮಧ್ಯಾಹ್ನದ ರಣ ಬಿಸಿಲಿನಲ್ಲೂ ಆಟದಲ್ಲಿ ಮುಳುಗಿ ಹೋಗಿರುತ್ತಿದ್ದ ಮಕ್ಕಳನ್ನು ಊಟಕ್ಕೆ ಕರೆತರಬೇಕೆಂದರೆ ತಾಯಂದಿರು ಸುಸ್ತಾಗುತ್ತಿದ್ದರು. ಆದರೆ, ಮಕ್ಕಳು ರಾತ್ರಿ ಅಜ್ಜಿಯ ಕೈತುತ್ತಿನ ಊಟಕ್ಕಾಗಿ ಸಾಲುಗಟ್ಟುತ್ತಿದ್ದರು. ಅಜ್ಜಿ ಹೊಲಿದ ಕೌದಿಯಲ್ಲಿ ಮಲಗಿ ಏಳು ಸಮುದ್ರಗಳನ್ನು ದಾಟಿ ಗಿಳಿ ತಂದು ರಾಕ್ಷಸನನ್ನು ಕೊಂದು ರಾಜಕುಮಾರಿಯನ್ನು ತಂದ ಕಥೆ, ಏಳು ಕೊಪ್ಪರಿಗೆ ಹೊನ್ನನ್ನು ಸರ್ಪಗಳು ಕಾವಲು ಕಾಯುತ್ತಿರುವ ಕಥೆ, ನರಿ ಕರಡು ಸೇರಿ ಬೇಸಾಯ ಮಾಡುವ ಕಥೆ ಕೇಳಲು ಮುಗಿಬೀಳುತ್ತಿದ್ದರು. ಆದರೆ ಈಗ ! ಒಂದೋ ಟಿ.ವಿ, ಇಲ್ಲವೇ ಮೊಬೈಲ್‌ ಗೇಮ್‌ನಲ್ಲಿ ಮುಳುಗುತ್ತಾರೆ. ಸಿನಿಮಾ ಗೀಳು ಹತ್ತಿಸಿಕೊಂಡವರು ಚಿತ್ರಮಂದಿರಗಳ ಸುತ್ತ ಸುಳಿದಾಡುತ್ತಾರೆ.

ಈ ರೀತಿಯ ಜೀವನದಿಂದಾಗಿ ಮಕ್ಕಳು ಸೋಮಾರಿತನದ ಹಾದಿ ಹಿಡಿದಿದ್ದಾರೆ. ಸಂಬಂಧಗಳ ಮೌಲ್ಯ ಮರೆದಿದ್ದಾರೆ. ಇದರಿಂದ ಮಕ್ಕಳ ಜೀವನ ಶೈಲಿ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರಿದೆ.

ಈಜಿನ ಮೋಜು: ಈಜುವುದೆಂದರೆ ಗ್ರಾಮೀಣ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಬಲು ಮೋಜಿನ ಆಟ. ತೋಟದ ಬಾವಿ, ತೊಟ್ಟಿಗಳನ್ನು ಹುಡುಕಿಕೊಂಡು ಹೋಗಿ ಕದ್ದು ಮುಚ್ಚಿ ಈಜುವುದರಲ್ಲಿ ಸಿಗುವ ಮಜಾವೇ ಬೇರೆ ! ಇದನ್ನು ಹೇಳುವುದಲ್ಲ ಅನುಭವಿಸಿಯೇ ತೀರಬೇಕು ಎನ್ನುತ್ತಾರೆ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.