ADVERTISEMENT

ಗುಡಿ ಕೈಗಾರಿಕೆ ಆರ್ಥಿಕತೆಗೆ ಸಹಕಾರಿ

ಬೆಟ್ಟಕೋಟೆ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 6:00 IST
Last Updated 25 ಜನವರಿ 2023, 6:00 IST
ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾವೇರಿ ಸಂಜೀವಿನಿ ಒಕ್ಕೂಟದಿಂದ ಮಹಿಳಾ ಗ್ರಾಮ ಸಭೆ ನಡೆಯಿತು
ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾವೇರಿ ಸಂಜೀವಿನಿ ಒಕ್ಕೂಟದಿಂದ ಮಹಿಳಾ ಗ್ರಾಮ ಸಭೆ ನಡೆಯಿತು   

ಚನ್ನರಾಯಪಟ್ಟಣ (ದೇವನಹಳ್ಳಿ): ‘ಮಹಿಳೆಯರು ಸಂಘಗಳ ಮೂಲಕ ಸಾಲ ಪಡೆದು ಗುಡಿ ಕೈಗಾರಿಕೆ ಸ್ಥಾಪಿಸಿ ಬೇರೆಯವರಿಗೆ ಕೆಲಸ ಕೊಡುವಂತಾಗಬೇಕು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ವಿಠಲ್‌ ಕಾವಳೆ ಸಲಹೆ ನೀಡಿದರು.

ತಾಲ್ಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಕಾವೇರಿ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಮಹಿಳಾ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು ನಾಲ್ಕು ವರ್ಷದಿಂದ ಕಾವೇರಿ ಸಂಜೀವಿನಿ ಒಕ್ಕೂಟಕ್ಕೆ ₹ 15 ಲಕ್ಷ ಸಾಲ ನೀಡಲಾಗಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಎಲ್ಲಾ ರಂಗದಲ್ಲೂ ಮುಂದೆ ಬರಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ಹಲವಾರು ಯೋಜನೆಗಳು ಜಾರಿಗೊಂಡಿವೆ ಎಂದು ತಿಳಿಸಿದರು.

ADVERTISEMENT

ಸಂಘಗಳ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರು ಅಭಿವೃದ್ಧಿಯಾಗುವುದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ. ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಬೆಟ್ಟಕೋಟೆ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ವಾಹನ ಚಾಲನೆಯ ಜವಾಬ್ದಾರಿಯನ್ನು ಮಹಿಳೆಯರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಗ್ರಾಮಗಳ ಕಸವನ್ನು ಒಂದೆಡೆ ಸೇರಿಸುವುದಕ್ಕೂ ಹಾಗೂ ಸ್ವಚ್ಛತೆ ಮಾಡು ವುದಕ್ಕೂ ಮಹಿಳೆಯರೇ ಸಹಕಾರ ನೀಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಯಲ್ಲಿ ಮಹಿಳೆ ಯರಿಗೆ ಇಂತಹ ಕಾರ್ಯಕ್ರಮ ಆಯೋಜಿಸ ಲಾಗಿದೆ. ಇದರಲ್ಲಿ ಭಾಗವಹಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಪಿಡಿಒ ಮಲ್ಲೇಶ್‌ ಮಾತನಾಡಿ, ‘ಹೆಣ್ಣೆಂದರೆ ಪ್ರಕೃತಿ; ಹೆಣ್ಣೆಂದರೆ ಸಂಸ್ಕೃತಿ. ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಎಲ್ಲವೂ ಗುಲಾಬಿ ಬಣ್ಣದ ವರ್ಣಮಯ ರೀತಿಯಲ್ಲಿ ಇರಬೇಕೆಂಬ ಆದೇಶದಂತೆ ಅದೇ ರೀತಿಯಲ್ಲಿ ಅಲಂಕಾರಗೊಳಿಸಿದ್ದೇವೆ ಎಂದು ತಿಳಿಸಿದರು.

ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಸೌಲಭ್ಯಗಳು ಮಹಿಳೆಯರಿಗೆ ಸಿಗಬೇಕು ಎಂದು ಸೂಚಿಸಿದೆ. ಪಂಚಾಯಿತಿಯಲ್ಲಿಯೇ ಗ್ರಾಮೀಣ ಕ್ರೀಡಾಕೂಟವನ್ನು ಮೊದಲು ಆಯೋಜಿಸಿದ್ದೇವೆ. ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ಹೇಳಿದರು.

ಗ್ರಾ.ಪಂ. ಅಧ್ಯಕ್ಷ ಮಂಜುನಾಥ, ತಾಲ್ಲೂಕು ಸಂಜೀವಿನಿ ಅಭಿಯಾನ ನಿರ್ವಹಣೆ ಘಟಕದ ಮೇಲ್ವಿಚಾರಕ ಮದ್ದೂರಪ್ಪ, ವ್ಯವಸ್ಥಾಪಕಿ ತನುಶ್ರೀ, ಮೇಲ್ವಿಚಾರಕ ಶಾಹಿದ್‌ ಪಾಷ, ಗ್ರಾ.ಪಂ. ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ಲೋಕೇಶ್‌ ಗಾಂಧಿ, ಭೀಮೇಶ್, ನಾರಾಯಣಸ್ವಾಮಿ, ವಿದ್ಯಾರಾಣಿ, ಅನಿತಾ, ಅರ್ಚನಾ, ಭಾಗ್ಯಲಕ್ಷ್ಮಿ, ಕಾವೇರಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವೆಂಕಟಮ್ಮ, ಉಪಾಧ್ಯಕ್ಷೆ ಪಾರ್ವತಮ್ಮ, ಕಾರ್ಯದರ್ಶಿ ಪ್ರತಿಭಾ, ಸಹ ಕಾರ್ಯದರ್ಶಿ ತನುಜಾ, ಖಜಾಂಚಿ ಮಮತಾ, ಕರ ವಸೂಲಿಗಾರ ಕೇಶವ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.