ADVERTISEMENT

ಜೋಡಿ ಕೊಲೆ: ದೂರವಾಗದ ಜನರ ಆತಂಕ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 5:09 IST
Last Updated 15 ಮಾರ್ಚ್ 2023, 5:09 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ   

ದೊಡ್ಡಬಳ್ಳಾಪುರ: ಸಂಜೆ ವೇಳೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಕುಸಿತವಾಗಿವೆ. ರಾತ್ರಿ 8ಗಂಟೆಗೆ ಜನರ ಒಡಾಟವೇ ವಿರಳವಾಗುತ್ತಿದೆ. ಚಾಕು ಇರಿತ ಘಟನೆಯ ನಂತರ ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಇದು ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದ ಜನರಿಂದ ಕೇಳಿಬಂದ ಆತಂಕದ ಮಾತುಗಳು.

ಫೆ. 17ರಂದು ಕ್ರಿಕೆಟ್‌ ಆಟದ ವಿಚಾರವಾಗಿ ದೊಡ್ಡಬೆಳವಂಗಲ ಕಾಲೇಜು ಮೈದಾನದಲ್ಲಿ ನಡೆದ ಗಲಾಟೆ ನಂತರ ನಡುರಸ್ತೆಯಲ್ಲೇ ಕಾಲೇಜು ವಿದ್ಯಾರ್ಥಿಗಳಾದ ಭರತ್‌ಕುಮಾರ್‌ ಹಾಗೂ ಪ್ರತೀಕ್‌ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡ ಲಾಗಿತ್ತು. ಈ ಘಟನೆಯಿಂದ ಇಡೀ ತಾಲ್ಲೂಕಿನ ಜನತೆ ಬೆಚ್ಚಿ ಬಿದ್ದಿತ್ತು. ಜೋಡಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಈಗಾಗಲೇ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇನ್ನೂ ಮೂವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ADVERTISEMENT

ತಾಲ್ಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿನ ದೊಡ್ಡಬೆಳವಂಗಲ ಮೂಲಕ ದಾಬಸ್‌ಪೇಟೆ- ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ನಂತರ ದೊಡ್ಡಬೆಳವಂಗಲ ಈ ಭಾಗದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳೆದಿದೆ. ಬೇಕರಿ, ಬಟ್ಟೆ ಅಂಗಡಿ, ಬಾರ್‌ ಮತ್ತು ರೆಸ್ಟೋರೆಂಟ್‌, ಡಾಬಾಗಳು ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳು ಹೈಟೆಕ್‌ ಸ್ಪರ್ಶ ಪಡೆದಿದ್ದು, ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ವಿಧಾನಸಭಾ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಸಂಜೆ ವೇಳೆ ವ್ಯಾಪಾರ ಬಿರುಸುಗೊಂಡಿತ್ತು. ವಿವಿಧ ರಾಜಕೀಯ ಪಕ್ಷದ ಯುವಕರ ಗುಂಪುಗಳು ಒಂದೆಡೆ ಸೇರುತ್ತಿದ್ದ ಕೇಂದ್ರವಾಗಿ ದೊಡ್ಡಬೆಳವಂಗಲ ಬೆಳೆದಿತ್ತು. ಹೆದ್ದಾರಿ ನಿರ್ಮಾಣಕ್ಕಾಗಿ ರಸ್ತೆ ವಿಸ್ತರಣೆಯಾದ ನಂತರ ರಸ್ತೆ ಬದಿಯಲ್ಲಿದ್ದ ಹಳೇ ಅಂಗಡಿ ಮಳಿಗೆಯ ಕಟ್ಟಡಗಳು ತೆರವಾಗಿದ್ದವು. ಇದರಿಂದ ಪರಿಹಾರದ ಹಣ ಬಂದ ನಂತರ ಅಂಗಡಿಗಳು ಹೈಟೆಕ್‌ ರೂಪ ಪಡೆದಿದ್ದವು. ಚಾಕು ಇರಿತ ಘಟನೆ ನಂತರ ಸಂಜೆ ವೇಳೆ ವ್ಯಾಪಾರ ಕುಸಿತವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಇಲ್ಲಿನ ಬೇಕರಿಯೊಂದರ ಮಾಲೀಕರು.

ಜೋಡಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಬೆಂಗಳೂರು, ನೆಲಮಂಗಲಕ್ಕೆ ಮಾತ್ರ ಸೀಮಿತವಾಗಿದ್ದ ರೌಡಿಗಳ ಉಪಟಳ ಇಲ್ಲಿಗೂ ವಿಸ್ತರಣೆಯಾಗಿರುವ ಆತಂಕ ಜನರನ್ನು ಕಾಡುತ್ತಿದೆ. ಹೀಗಾಗಿ ಜಮೀನು, ನಿವೇಶನ ವ್ಯವಹಾರ, ಸಣ್ಣಪುಟ್ಟ ಉದ್ಯಮಿಗಳು, ವ್ಯಾಪಾರಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಇಲ್ಲಿನ ಪೊಲೀಸ್‌ ಠಾಣೆಯ ಕಟ್ಟಡವನ್ನು ಹೊರಭಾಗದ ಅಜ್ಜನಕಟ್ಟೆಗೆ ಸ್ಥಳಾಂತರಿಸಲಾಗಿದೆ. ಜನದಟ್ಟಣೆ ಇರುವ ಸ್ಥಳದಲ್ಲಿಯೇ ಪೊಲೀಸ್‌ ಠಾಣೆ ಇದ್ದಿದ್ದರೆ ಚಾಕು ಇರಿತದ ಘಟನೆ ನಡೆಯುತ್ತಿರಲಿಲ್ಲ. ಹೀಗಾಗಿ ಈ ಹಿಂದೆ ಇದ್ದ ದೊಡ್ಡಬೆಳವಂಗಲ ಗ್ರಾಮದ ರಸ್ತೆ ಬದಿಯಲ್ಲೇ ಔಟ್‌ ಪೊಲೀಸ್‌ ಠಾಣೆ ನಿರ್ಮಿಸಿ ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿ ಸಿ.ಎಚ್‌.ರಾಮಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.