ADVERTISEMENT

ದೇವನಹಳ್ಳಿ ನ್ಯಾಯಾಲಯದ ಮೊಹರು ಕಳ್ಳತನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:20 IST
Last Updated 24 ಅಕ್ಟೋಬರ್ 2025, 6:20 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ದೇವನಹಳ್ಳಿ: ಇತ್ತೀಚೆಗೆ ದೇವನಹಳ್ಳಿ ಪಟ್ಟಣದಲ್ಲಿರುವ ಸಿವಿಲ್‌ ನ್ಯಾಯಾಲಯದ ಕೆಲಸದ ವೇಳೆಯಲ್ಲಿ  ಅಪರಿಚಿತ ವ್ಯಕ್ತಿಗಳು ಕಚೇರಿಗೆ ನುಗ್ಗಿ ದೈನಂದಿನ ಪತ್ರ ವ್ಯವಹಾರಗಳಿಗೆ ಉಪಯೋಗಿಸುವ ಎರಡು ಮೊಹರು ಕಳ್ಳತನ ಮಾಡಿದ್ದಾರೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಹಿರಿಯ ಶಿರಸ್ತೇದಾರ್ ಸುದರ್ಶನ್‌ ದೂರು ದಾಖಲಿಸಿದ್ದಾರೆ.

ADVERTISEMENT

ಅ.17ರಂದು ಸಂಜೆ 4.30ರಿಂದ 4.40ರ ನಡುವೆ ಈ ಘಟನೆ ಸಂಭವಿಸಿದೆ. ಆರೋಪಿಗಳನ್ನು ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಶಿರಸ್ತೆದಾರರು ಸಂಜೆ ಶೌಚಾಲಯಕ್ಕೆ ತೆರಳಿದ ವೇಳೆಯಲ್ಲಿ ಬೆಂಚಿನ ಡ್ರಾಯರ್‌ನಲ್ಲಿ ಇಟ್ಟಿದ್ದ ಸೀಲ್‌ ಅನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಕಲು ಶಾಖೆಯಲ್ಲಿದ್ದ ಮಲ್ಲಿಕಾರ್ಜುನ್‌ ಎಂಬವವರ ಬಳಿಯಿದ್ದ ಇನ್ನೊಂದು ಸೀಲ್‌ ಅನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ನ್ಯಾಯಾಲಯದಿಂದ ಪಡೆಯುವ ಆದೇಶ ಸೇರಿದಂತೆ ಇತರೇ ದಾಖಲೆಗಳ ನಕಲಿಗೆ ದೃಢೀಕರಣ ಮಾಡಲು ಈ ಮೊಹರುಗಳನ್ನು ಬಳಕೆ ಮಾಡಲಾಗುತ್ತದೆ. ಇದು ನ್ಯಾಯಾಲಯದ ಅತ್ಯಂತ ಪ್ರಮುಖ ಮೊಹರು. ಇದರಿಲ್ಲದೆ ದೈನಂದಿನ ಆಡಳಿತಾತ್ಮಕ ಕೆಲಸಗಳು ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಎರಡೂ ಮೊಹರುಗಳನ್ನು ನಕಲಿ ದಾಖಲೆ ಸೃಷ್ಟಿ ಅಥವಾ ದಾಖಲೆಗಳ ದುರುಪಯೋಗಕ್ಕಾಗಿ ಕಳ್ಳತನ ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಕಳ್ಳತನ ನಡೆದ ಕಚೇರಿಗಳ ಒಳಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಆದರೆ ನ್ಯಾಯಾಲಯದ ಆವರಣದಲ್ಲಿನ ಕ್ಯಾಮೆರಾ ದೃಶ್ಯ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.