ADVERTISEMENT

ರಾಜಕೀಯ ವೈಷಮ್ಯದ ಆದೇಶಕ್ಕೆ ತಡೆ: ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಗಂಗಯ್ಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 13:44 IST
Last Updated 14 ಜನವರಿ 2020, 13:44 IST
ಪತ್ರಿಕಾಗೋಷ್ಟಿಯಲ್ಲಿ ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಗಂಗಯ್ಯ ಮಾತನಾಡಿದರು
ಪತ್ರಿಕಾಗೋಷ್ಟಿಯಲ್ಲಿ ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಗಂಗಯ್ಯ ಮಾತನಾಡಿದರು   

ದೊಡ್ಡಬಳ್ಳಾಪುರ: ರಾಜಕೀಯ ವೈಷಮ್ಯಕ್ಕೆ ನೀಡಲಾದ ದೂರನ್ನು ಪರಿಶೀಲಿಸದೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮ ಪಂಚಾಯಿತಿ ಸದಸ್ಯತ್ವ ಮತ್ತು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಪ್ರಾದೇಶಿಕ ಆಯುಕ್ತರು ನೀಡಲಾಗಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ ತಡೆ ನೀಡಿದೆ ಎಂದು ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಗಂಗಯ್ಯ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಸರ್ಕಾರದಿಂದ ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಯ್ಯನ ಅಗ್ರಹಾರ, ಪುರುಷನಹಳ್ಳಿ ಗ್ರಾಮಗಳಿಗೆ 2016ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ಸ್ಥಳ ಇಲ್ಲದ ಕಾರಣ 20 ವರ್ಷಗಳಿಂದ ಬಳಸದೆ ಅನುಪಯುಕ್ತವಾಗಿದ್ದ ಹಾಗೂ ಶಿಥಿಲವಾಗಿದ್ದ ಶಾಲಾ ಕಟ್ಟಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ನೆಲಸಮಗೊಳಿಸಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಇದರಲ್ಲಿ ಯಾವುದೇ ವೈಯಕ್ತಿಕ ಲಾಭದ ಉದ್ದೇಶ ಇರಲಿಲ್ಲ. ಆದರೆ ರಾಜಕೀಯ ವೈಷಮ್ಯದಿಂದ ನೀಡಲಾದ ದೂರನ್ನು ಪರಿಶೀಲಿಸದೆ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯ ಅಧಿಕಾರಿಗಳು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದರು. ಕೆಳಹಂತದ ಅಧಿಕಾರಿಗಳು ನೀಡಿದ ವರದಿಯನ್ನು ಕೂಲಂಕಶವಾಗಿ ಪರಿಗಣಿಸದೆ, ಸ್ಥಳ ಪರಿಶೀಲಿಸದೆ ವರದಿ ನೀಡಿದ್ದರು. ಈ ಕುರಿತು ನ್ಯಾಯಾಲಯದ ಮೊರೆಹೊಗಿದ್ದು ಅಧಿಕಾರಿಗಳ ಬೇಜವಾಬ್ದಾರಿ ಕಂಡುಬಂದ ಕಾರಣ ನ್ಯಾಯಾಲಯ ವಜಾ ಆದೇಶವನ್ನು 8 ವಾರಗಳ ಕಾಲ ತಡೆನೀಡಿದೆ ಎಂದರು.

ಪಿಎಲ್‍ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ವಿ.ಪ್ರಕಾಶ್ ಮಾತನಾಡಿದರು. ಕನಸವಾಡಿ ಗ್ರಾಮ ಪಂಚಾಯಿತಿ ಸದಸ್ಯ ರಘುರಾಂ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.