ADVERTISEMENT

ಕೊರೊನಾ ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಅದಲು ಬದಲು

ಕುಟುಂಬದ ಸದಸ್ಯರ ಪ್ರತಿಭಟನೆ; ಸರ್ಕಾರಿ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಮೇ 2021, 4:37 IST
Last Updated 9 ಮೇ 2021, 4:37 IST
ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳಿಬ್ಬರ ಮೃತದೇಹ ಅದಲು ಬದಲಾದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು
ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳಿಬ್ಬರ ಮೃತದೇಹ ಅದಲು ಬದಲಾದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು   

ಆನೇಕಲ್:ಕೊರೊನಾ ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಅದಲು ಬದಲಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿ, ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಖಂಡಿಸಿದರು.

ಮುತ್ತಗಟ್ಟಿ ಮಂಜುನಾಥ್‌(45) ಎಂಬುವರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೇ ಆಸ್ಪತ್ರೆಯಲ್ಲಿ ಹೀಲಲಿಗೆ ಕೃಷ್ಣಪ್ಪ ಎಂಬುವವರೂ ಮೃತಪಟ್ಟಿದ್ದರು. ಮಂಜುನಾಥ್‌ ಅವರ ಕುಟುಂಬದವರಿಗೆ ಹೀಲಲಿಗೆ ಕೃಷ್ಣಪ್ಪ ಅವರ ಮೃತದೇಹ ನೀಡಿದ್ದಾರೆ.

ಮಂಜುನಾಥ್‌ ಕುಟುಂಬದವರು ಮುತ್ತಗಟ್ಟಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಶವಸಂಸ್ಕಾರ ಪೂರ್ಣಗೊಳಿಸಿದ್ದರು. ಈ ಮಧ್ಯೆ ಹೀಲಲಿಗೆ ಕೃಷ್ಣಪ್ಪ ಅವರ ಕುಟುಂಬದವರು ಮೃತದೇಹ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಕೃಷ್ಣಪ್ಪನ ಶವವಲ್ಲ ಎಂದು ತಿಳಿಸಿದ್ದಾರೆ. ಆಗ ಎಚ್ಚೆತ್ತುಕೊಂಡ ಆಸ್ಪತ್ರೆಯವರು ಶನಿವಾರ ಮಧ್ಯಾಹ್ನ ಮಂಜುನಾಥ್‌ ಕುಟುಂಬದವರಿಗೆ ಕರೆ ಮಾಡಿ ಮಂಜುನಾಥ್‌ ಶವ ಆಸ್ಪತ್ರೆಯಲ್ಲಿಯೇ ಇದೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.

ADVERTISEMENT

ಇದರಿಂದ ಕುಪಿತಗೊಂಡ ಎರಡೂ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿ ಖಂಡಿಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸಮಂದೂರು ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಷ್ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಶವ ಗುರುತಿಸದ ಸಿಬ್ಬಂದಿ ಚಿಕಿತ್ಸೆಯನ್ನು ಎಷ್ಟರಮಟ್ಟಿಗೆ ನೀಡಿದ್ದಾರೆ ಎಂಬ ಅನುಮಾನ ಬರುತ್ತಿದೆ. ಶುಕ್ರವಾರ ರಾತ್ರಿವರೆಗೂ ಚೆನ್ನಾಗಿ ಮಾತನಾಡುತ್ತಿದ್ದ ಮಂಜುನಾಥ್ ಶನಿವಾರ ಇಲ್ಲವಾಗಿದ್ದಾರೆ. ಅವರ ಕುಟುಂಬ ದಿಕ್ಕಿಲ್ಲದಂತಾಗಿದೆ’ ಎಂದರು.

ಈ ನಡುವೆ ಶವ ಅದಲು ಬದಲು ಮಾಡುವ ಮೂಲಕ ಅವರ ಕುಟುಂಬವನ್ನು ಮತ್ತಷ್ಟು ಘಾಸಿಗೊಳಿಸಿದ್ದಾರೆ. ಇದು ಅತ್ಯಂತ ಬೇಜವಾಬ್ದಾರಿಯಾಗಿದೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಪ್ಪ ಮಾತನಾಡಿ, ಕೊರೊನಾ ದೇಶವನ್ನು ಕಾಡುತ್ತಿದೆ. ಆದರೆ, ಇಂತಹ ಸಂಕಷ್ಟದ ಸಮಯದಲ್ಲಿ ಬೆಡ್‌ ಮತ್ತು ಆಮ್ಲಜನಕವಿಲ್ಲದೇ ಜನ ಸಾಯುವಂತಾಗಿರುವುದು ಆಡಳಿತದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.