ADVERTISEMENT

ಬೆಳೆ ಸಮೀಕ್ಷೆ ಆ್ಯಪ್ ವರದಾನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:47 IST
Last Updated 19 ಆಗಸ್ಟ್ 2021, 3:47 IST

ವಿಜಯಪುರ: ರೈತರು ತಮ್ಮ ಜಮೀನಿನ ಒಳಗೆ ನಿಂತು ಬೆಳೆಯ ಚಿತ್ರ ತೆಗೆಯುವ ಮೂಲಕ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಸರ್ವೆ ನಂಬರ್‌, ಹೆಸರು, ಬೆಳೆ ವಿವರ, ವಿಸ್ತೀರ್ಣ ದಾಖಲಿಸಿದರೆ ಸರ್ಕಾರದಿಂದ ಸಿಗುವಂತಹ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ವೀಣಾ ಹೇಳಿದರು.

ಪಟ್ಟಣದಲ್ಲಿ ಮಾತನಾಡಿದ ಅವರು ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಮಾಹಿತಿ ಮುಖ್ಯ. ಬೆಳೆ ಸಮೀಕ್ಷೆ ಆ್ಯಪ್ ಮೂಲಕ ರೈತರು ದಾಖಲಿಸಿರುವ ಮಾಹಿತಿಯನ್ನು ಬೆಳೆ ದರ್ಶಕ್‌ ಮೂಲಕ ತಾವೇ ಮೊಬೈಲ್‌ನಲ್ಲಿ ಪರಿಶೀಲಿಸಿಕೊಳ್ಳಲು ಅವಕಾಶವಿದೆ ಎಂದರು.

ನಿಗದಿತ ಸರ್ವೆ ನಂಬರ್‌ನಲ್ಲಿ ನಿಂತರೆ ಮಾತ್ರ ಆ್ಯಪ್‌ನಲ್ಲಿ ಬೆಳೆ ವಿವರ ದಾಖಲಿಸಲು ಸಾಧ್ಯ. ಮಾಹಿತಿ ತಂತ್ರಜ್ಞಾನ ಎಲ್ಲಾ ಕ್ಷೇತ್ರದಲ್ಲೂ ಬಳಕೆಯಾಗುತ್ತಿದೆ. ಕೃಷಿ ಕ್ಷೇತ್ರದಲ್ಲೂ ತಂತ್ರಜ್ಞಾನ ರೈತರ ನೆರವಿಗೆ ನಿಂತಿದೆ. ಮುಂಗಾರು ಬಿತ್ತನೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಬೆಳೆ ಸಮೀಕ್ಷೆಯ ಆ್ಯಪ್ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಹೇಳಿದರು.

ADVERTISEMENT

ರೈತರು ಆ್ಯಪ್ ಮೂಲಕ ಬೆಳೆಯ ಚಿತ್ರ ಸಮೇತ ಮಾಹಿತಿ ದಾಖಲಿಸುತ್ತಿದ್ದಂತೆ ಫ್ರೂಟ್‌ ಐಡಿಯಲ್ಲಿ ಮಾಹಿತಿ ಸಂಗ್ರಹವಾಗುತ್ತದೆ. ರೈತರು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ಯಾವುದಾದರೂ ಇಲಾಖೆಯಲ್ಲಿ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪುಸ್ತಕದ ನಕಲು ಪ್ರತಿ ಸಲ್ಲಿಸಿ ‘ಫ್ರೂಟ್‌’ (FRUITS) ಐಡಿ ಪಡೆಯಬಹುದು ಎಂದರು.

ರೈತರು ಬೆಳೆ ಸಮೀಕ್ಷೆ ನಡೆಸಿದ ಎಲ್ಲಾ ಮಾಹಿತಿಯು ಫ್ರೂಟ್‌ನಲ್ಲಿ ದಾಖಲಾಗುತ್ತದೆ. ಈ ಮಾಹಿತಿ ಆಧರಿಸಿ ರೈತರಿಗೆ ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿ ಮಾಡಲಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಮಾಹಿತಿ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.