ADVERTISEMENT

ಸಿಎಸ್‌ಸಿ ಜನರ ಸುಲಿಗೆ ಕೇಂದ್ರಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 14:08 IST
Last Updated 10 ಜನವರಿ 2020, 14:08 IST
ಸಾಮಾನ್ಯ ಸೇವಾ ಕೇಂದ್ರ ಸಾಂದರ್ಭಿಕ ಚಿತ್ರ
ಸಾಮಾನ್ಯ ಸೇವಾ ಕೇಂದ್ರ ಸಾಂದರ್ಭಿಕ ಚಿತ್ರ   

ಸೂಲಿಬೆಲೆ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳು (ಸಿ.ಎಸ್.ಸಿ) ಸಾಮಾನ್ಯ ಜನರನ್ನು ಸುಲಿಗೆ ಮಾಡುವ ಮಧ್ಯವರ್ತಿಗಳ ಕೇಂದ್ರಗಳಾಗಿವೆ ಎಂದು ದೂರಲಾಗಿದೆ.

ಈ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆಧಾರ್ ತಿದ್ದುಪಡಿ (ನಗರ ಪ್ರದೇಶದ ಕೆಲವು ಕೇಂದ್ರಗಳಲ್ಲಿ) ಹಾಗೂ ಸೇವಾ ಸಿಂಧು ಅಡಿಯಲ್ಲಿ ಪಹಣಿ, ಮ್ಯುಟೇಷನ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸೇರಿದಂತೆ ಸುಮಾರು 360ಕ್ಕೂ ಹೆಚ್ಚು ಸೇವೆಗಳನ್ನು ಸಾಮಾನ್ಯ ಜನರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಗಬೇಕು ಎಂಬ ಉದ್ದೇಶದಿಂದ ಈ ಕೇಂದ್ರಗಳು ಆರಂಭಗೊಂಡಿವೆ. ಆದರೆ, ಸಾಮಾನ್ಯರ ಸೇವೆಗೆ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಒಂದಕ್ಕೆ ಸರ್ಕಾರ ನಿಗದಿಪಡಿಸಿರುವ ಸೇವಾ ಶುಲ್ಕ ₹10ಆಗಿದ್ದರೆ, ಸಿ.ಎಸ್.ಸಿ ಕೇಂದ್ರಗಳಲ್ಲಿ ₹100ರಿಂದ ₹200ವರೆಗೆ ಪಾವತಿಸಿಕೊಳ್ಳಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ADVERTISEMENT

ಕೆಲವು ಕೇಂದ್ರಗಳು ಬೆಳಿಗ್ಗೆ ಬಾಗಿಲು ಹಾಕಿ ಸಂಜೆ ನಂತರ ಕಾರ್ಯ ಚಟುವಟಿಕೆ ಆರಂಭಿಸುತ್ತವೆ. ಸೇವಾ ಮನೋಭಾವಗಿಂತ ಹಣ ಗಳಿಸುವುದೇ ಪ್ರಮುಖ ಉದ್ದೇಶವಾಗಿದೆ. ಸರ್ವರ್‌ ತೊಂದರೆ ಎನ್ನುವ ಸಬೂಬು ಹೇಳುತ್ತಾರೆ ಎಂದು ಸ್ಥಳೀಯರಾದ ಶಿವಶಂಕರ್‌ ದೂರುತ್ತಾರೆ.

ಸಿಎಸ್‌ಸಿ ಕೇಂದ್ರಗಳು ನಾಯಿಕೊಡೆಯಂತೆ ಬೆಳೆಯುತ್ತಿವೆ. ಸೂಲಿಬೆಲೆ ಒಂದರಲ್ಲಿಯೇ 6ಕ್ಕೂ ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ತಿಳಿದು ಬಂದಿದೆ.

ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕ ಮಹೇಶ್ ಈ ಕುರಿತು ಪ್ರತಿಕ್ರಿಯಿಸಿ, ಈ ಕೇಂದ್ರಗಳ ಪ್ರಮುಖ ಉದ್ದೇಶವೇ ಸೇವೆ. ಸರ್ಕಾರಿ, ಅರೆ ಸರ್ಕಾರಿ ಸೇವೆಗಳನ್ನು ಕಡ್ಡಾಯವಾಗಿ ಮಾಡಿಕೊಡಬೇಕು. ಒಂದು ಸೇವೆಗೆ ಸೀಮಿತ ಅಲ್ಲ. ಪಂಚಾಯಿತಿ ವ್ಯಾಪ್ತಿಗೆ ಒಂದು ಕೇಂದ್ರ ಮಂಜೂರು ಮಾಡಲು ಅವಕಾಶವಿದೆ. ಆದರೆ, ಸೇವೆ ಹಿತದೃಷ್ಟಿಯಿಂದ ಸೂಲಿಬೆಲೆಗೆ 3 ಕೇಂದ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.