ADVERTISEMENT

ಆಧ್ಯಾತ್ಮಿಕ ಮೌಲ್ಯ; ದೀರ್ಘ ಪ್ರತಿಫಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 12:56 IST
Last Updated 11 ಫೆಬ್ರುವರಿ 2020, 12:56 IST
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮವನ್ನು ಹರಿಕಥೆ ವಿದ್ವಾಂಸ ಪುಟ್ಟಣ್ಣ ದಾಸ್ ಉದ್ಘಾಟನೆ ಮಾಡಿದರು
ವಿಜಯಪುರದ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮವನ್ನು ಹರಿಕಥೆ ವಿದ್ವಾಂಸ ಪುಟ್ಟಣ್ಣ ದಾಸ್ ಉದ್ಘಾಟನೆ ಮಾಡಿದರು   

ವಿಜಯಪುರ: ‘ಆಧ್ಯಾತ್ಮಿಕ ಮೌಲ್ಯಗಳು, ತಾತ್ಕಾಲಿಕ ಸುಖವನ್ನಲ್ಲ ಬದಲಾಗಿ ದೀರ್ಘಕಾಲಿಕ ಪ್ರತಿಫಲಗಳನ್ನು ಎತ್ತಿತೋರಿಸುತ್ತವೆ’ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಗುರುರಾಜ್ ಶರ್ಮ ಹೇಳಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಸೋಮವಾರ ಶ್ರೀಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ಪಾರಾಯಣ, ಕೈವಾರ ಯೋಗಿನಾರೇಯಣ ಯತೀಂದ್ರರ ಹಾಗೂ ಕನಕಪುರಂದರ ಗೀತ ತತ್ವಾಮೃತ ರಸಧಾರೆಯ 176 ನೇ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ 127ನೇ ಕಾರ್ಯಕ್ರಮದಲ್ಲಿ ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ’ ಎಂಬ ವಿಷಯಕ್ಕೆ ಉಪನ್ಯಾಸ ಕುರಿತು ಮಾತನಾಡಿದರು.

‘ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ದವೇ ಆನಂದ. ಆದರೆ, ಸುಖಕ್ಕೂ ಆನಂದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂಬುದು ಬಹುಮಂದಿಗೆ ತಿಳಿದೇ ಇಲ್ಲ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು, ಕಾಣದಿರುವಂಥದು ಸದಾಕಾಲವೂ ಇರುವದು. ನಿರ್ದಿಷ್ಟ ಹಂತದ ವರೆಗೆ ಹಣವು ಒಂದು ಆಶ್ರಯವಾಗಿ ನಮಗೆ ಉಪಯೋಗಕ್ಕೆ ಬರುತ್ತದೆ. ಅದು ನಮ್ಮ ಆತ್ಮರಕ್ಷಣೆಗೆ ಪ್ರಯೋಜನಕ್ಕೆ ಬರುವುದಿಲ್ಲ’ ಎಂದರು.

ADVERTISEMENT

‘ನಮ್ಮ ಜೀವನವನ್ನು ಹೆಚ್ಚು ಸಂತೃಪ್ತಿಕರವಾಗಿ ಮಾಡುವ ಪರಿಪೂರ್ಣ ಆರೋಗ್ಯ, ಸಂತೃಪ್ತಿಕರ ಕೆಲಸ, ಹಿತಕರ ವಿರಾಮ, ಉತ್ತೇಜನದಾಯಕವಾದ ಕುಟುಂಬ ಸಂಬಂಧಗಳು, ಮತ್ತು ದೇವರೊಂದಿಗಿನ ಶಾಶ್ವತ ಸ್ನೇಹವು ಮಾನವಕುಲಕ್ಕೆ ನಿರಂತರಕ್ಕೂ ಸಂತೋಷವನ್ನು ತರುತ್ತದೆ. ಆದ್ದರಿಂದ ಯುವಜನರೂ ಸೇರಿದಂತೆ ಎಲ್ಲರೂ ಹೆಚ್ಚು ಆದ್ಯಾತ್ಮಿಕವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ ಮಾತನಾಡಿ, ‘ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು. ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು. ಮಿತಿಮೀರಿ ಕೆಲಸ ಮಾಡುವುದು ಒತ್ತಡ ತರುತ್ತದೆ. ಒತ್ತಡವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಅಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು’ ಎಂದರು.

‘ಭೌತಿಕ ವಿಷಯಗಳ ಕಡೆಗಿನ ಅತಿಯಾದ ಚಿಂತನೆಯೇ ಈ ಎಲ್ಲಾ ದುರಂತಕ್ಕೆ ಕಾರಣವಾಗುತ್ತದೆ. ತನ್ನಲ್ಲಿರುವುದರಲ್ಲಿ ಆನಂದಿಸುವ ಬದಲು ಸ್ವತ್ತುಗಳನ್ನು ಒಟ್ಟುಗೂಡಿಸುವುದರಲ್ಲಿ ತಲ್ಲೀನನಾಗಿರುವ ವ್ಯಕ್ತಿ, ತನ್ನ ಸ್ವಂತ ಯೋಗಕ್ಷೇಮವನ್ನು ಸಂಕಷ್ಟಕ್ಕೆ ಸಿಲುಕುತ್ತಾನೆ. ಅದಕ್ಕೆ ಯಾರೂ ಅವಕಾಶ ನೀಡಬಾರದು’ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ‘ಹೆಚ್ಚೆಚ್ಚು ಭೌತಿಕ ವಿಷಯಗಳನ್ನು ಬೆನ್ನಟ್ಟುವುದು ಒಬ್ಬ ವ್ಯಕ್ತಿಯನ್ನು ತೃಪ್ತಿಪಡಿಸಲು ಅಸಾಧ್ಯವಾದ ಭಾವನೆ ಉಂಟುಮಾಡುತ್ತದೆ. ಇದು ಒಬ್ಬನು ಅನುಭವಿಸಬಹುದಾದ ಎಲ್ಲಾ ಆನಂದವನ್ನು ಅವನಿಂದ ಕಸಿದುಕೊಳ್ಳುತ್ತದೆ. ಪ್ರಪಂಚವು ನಿಮ್ಮ ಇಂದ್ರಿಯಗಳಾದ ದೃಷ್ಟಿ, ಸ್ಪರ್ಶ, ಪ್ರಾಣ, ಮತ್ತು ಶ್ರವಣವನ್ನು ರಂಜಿಸಲು ಹಾಗೂ ನೀವು ಪ್ರಾಪಂಚಿಕ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ನಿಮ್ಮ ಮನವೊಲಿಸಲು ಪ್ರಯತ್ನಿಸುತ್ತದೆ. ಕಣ್ಣಿನಾಸೆಯ ಮೇಲೆ ಒತ್ತನ್ನು ನೀಡುವಂತೆ ಮಾಡುತ್ತದೆ. ಈ ಗುರಿಗಳನ್ನು ತಲುಪಲು ಮೋಸದ ಮತ್ತು ಅಪ್ರಾಮಾಣಿಕ ವಿಧಾನಗಳನ್ನು ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ವಿಚಾರದಲ್ಲಿ ಎಚ್ಚರವಾಗಿದ್ದು, ಸನ್ಮಾರ್ಗದ ಕಡೆಗೆ ಸಾಗಬೇಕು’ ಎಂದರು.

ಹೆಣ್ಣು ಮಕ್ಕಳಿಗೆ ಬಳೆ ತೊಡಿಸಲಾಯಿತು. ಬಡವರಿಗೆ ಕಂಬಳಿ ವಿತರಣೆ ಮಾಡಿದರು. ವಿದ್ವಾನ್ ಪುಟ್ಟಣ್ಣ ದಾಸ್, ಸತ್ಸಂಗ ಉಪಾಧ್ಯಕ್ಷ ಪಿ.ನಾರಾಯಣಪ್ಪ, ವಸಂತ್‌ಕುಮಾರ್, ಚನ್ನೇಗೌಡ, ವಿ.ಎನ್.ರಮೇಶ್, ವಿ.ಎನ್.ವೆಂಕಟೇಶ್, ಕೆ.ಮುನಿರಾಜು, ಯರಪ್ಪ, ವಿ.ನಾಗರಾಜ್, ವರದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.