ADVERTISEMENT

ಬೇಂದ್ರೆ ಕವನ ವಿಚಾರ ವೈವಿಧ್ಯಮಯ

ಮನೆಯಂಗಳದಲ್ಲಿ ಕನ್ನಡ ಗಾಯನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 17:18 IST
Last Updated 1 ಅಕ್ಟೋಬರ್ 2023, 17:18 IST
ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ, ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ನಿಸರ್ಗ ಯೋಗ ಕೇಂದ್ರದಲ್ಲಿ ಶನಿವಾರ ನಡೆದ ಮನೆಯಂಗಳದಲ್ಲಿ ಕನ್ನಡ ಗಾನ ಪಯಣ ಕಾರ್ಯಕ್ರಮದಲ್ಲಿ ಅನಿಕೇತನ ಟ್ರಸ್ಟ್‌ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿದರು
ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ, ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ನಿಸರ್ಗ ಯೋಗ ಕೇಂದ್ರದಲ್ಲಿ ಶನಿವಾರ ನಡೆದ ಮನೆಯಂಗಳದಲ್ಲಿ ಕನ್ನಡ ಗಾನ ಪಯಣ ಕಾರ್ಯಕ್ರಮದಲ್ಲಿ ಅನಿಕೇತನ ಟ್ರಸ್ಟ್‌ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿದರು   

ದೊಡ್ಡಬಳ್ಳಾಪುರ: ದ.ರಾ.ಬೇಂದ್ರೆ ಅವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಅನಿಕೇತನ ಟ್ರಸ್ಟ್‌ ಅಧ್ಯಕ್ಷ ಡಿ.ಶ್ರೀಕಾಂತ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ, ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದ ಮನೆಯಂಗಳದಲ್ಲಿ ಕನ್ನಡ ಗಾಯನ ಕಾರ್ಯಕ್ರಮದಲ್ಲಿ ವರಕವಿ ದ.ರಾ.ಬೇಂದ್ರೆ ಕಾವ್ಯ ಕುರಿತು ಮಾತನಾಡಿದರು.

ದ.ರಾ.ಬೇಂದ್ರೆ ತಮ್ಮ ಜೀವನದುದ್ದಕ್ಕೂ ದುಃಖ,ಕಷ್ಟ ನೋಡಿದ ಕವಿ. ’ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ, ಕಲ್ಲು ಸಕ್ಕರೆಯಂತಹ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ’ ಎಂದವರು. ಹಾಗಾಗಿ ಬೇಂದ್ರೆ ಜೀವನವೇ ಕಾವ್ಯ, ಕಾವ್ಯವೇ ಜೀವನ ಎಂದಾಗಿದೆ ಎಂದರು.

ADVERTISEMENT

ಬೇಂದ್ರೆ ತಮ್ಮ ಕೃತಿಗಳಲ್ಲಿ ವೈವಿಧ್ಯಮಯ ವಿಚಾರಗಳನ್ನು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಅಭಿವ್ಯಕ್ತಿಗೊಳಿಸಿದರು. ಶಬ್ದಗಾರುಡಿಗರಾಗಿದ್ದ ಬೇಂದ್ರೆ ಅವರು, ಆಡು ಭಾಷೆ ನುಡಿಗಟ್ಟು ತಮ್ಮ ಕವನಗಳಲ್ಲಿ ಬಳಸಿದ್ದಾರೆ. ನಾಕುತಂತಿ ಕಾವ್ಯದ ಮೂಲಕ ನಾನು, ನೀನು, ಆನು, ತಾನು ಇವು ಮಾನವನ ಗುರುತಿಸುವಿಕೆ ನಾಲ್ಕು ಹಂತಗಳು ಎಂದರು.

ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಗಿರೀಶ್.ಎನ್.ಬರಗೂರು ಮಾತನಾಡಿ, ಬೇಂದ್ರೆ ಅವರ ಕವನಗಳ ವಿಚಾರ ವೈವಿಧ್ಯಮಯವಾಗಿದೆ. ನರಬಲಿ ಕವನ ಬರೆದು ಸೆರೆಮನೆ ವಾಸ ಅನುಭವಿಸಿದ ಬೇಂದ್ರೆ, ಒಂದೇ ಒಂದೇ ಕರ್ನಾಟಕ ಒಂದೇ ಎನ್ನುವ ಮೂಲಕ ಕರ್ನಾಟಕ ಏಕೀಕರಣ ಬೆಂಬಲಿಸಿದರು. ಅವರ ಕಾವ್ಯದ ಭಾಷೆ ಮತ್ತು ಭಾವನೆ ಸಾಹಿತ್ಯದಲ್ಲಿ ಅಭಿರುಚಿ ಹೊಂದಲು ಸಹಕಾರಿ ಆಗಿದೆ ಎಂದರು.

ಕನ್ನಡ ಗಾನ ಪಯಣ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಅವರ ಭಾವಗೀತೆಗಳನ್ನು ಕಲಾವಿದರಾದ ಕೆ.ಪಿ.ಪ್ರಕಾಶ್, ನಾಗರತ್ಮ‌ ಮಹಾಬಲೇಶ್ವರ್, ಚಂದ್ರಶೇಖರ್, ಸುರೇಖಾ ರವಿರಾಜ್, ನಾಗರತ್ನಮ್ಮ, ಎಂ.ಎಲ್.ಆಶಾ, ಜಯಲಕ್ಷ್ಮಿ ನಟರಾಜು, ಎಂ.ಪಿ.ಸಿ.ವೆಂಕಟೇಶ್, ನಾಗರಾಜು, ಜಿ.ಸುರೇಶ್, ಷಫೀರ್, ನಾಗದಳ ನಟರಾಜ್ ಹಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಗ ಸಂಘದ ಅಧ್ಯಕ್ಷ ಪ್ರೊ.ಎಂ.ಜಿ.ಅಮರನಾಥ, ಪ್ರಧಾನ ಕಾರ್ಯದರ್ಶಿ ಯೋಗ ನಟರಾಜು, ಖಜಾಂಚಿ ಕೆ.ಆರ್.ಶ್ಯಾಮಸುಂದರ್, ಸಂಚಾಲಕ ಎನ್.ಚಂದ್ರಶೇಖರ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಭಾರತ ಸೇವಾದಳ ತಾಲ್ಲೂಕು ಅಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿ ಹಮಾಮ್ ವೆಂಕಟೇಶ್, ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ, ನಿವೃತ್ತ ಪ್ರಾಂಶುಪಾಲ ಮೇಜರ್ ಎಸ್.ಮಹಾಬಲೇಶ್ವರ್, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಸಾ.ಲ.ಕಮಲನಾಥ, ಸಾಸಲು ಹೋಬಳಿ ಅಧ್ಯಕ್ಷ ಜಿ.ಎಂ.ನಾಗರಾಜು, ಪ್ರತಿನಿಧಿ ಮುನಿರಾಜು, ಸಂಸ್ಕ್ರತಿ ಟ್ರಸ್ಟ್‌ ಅಧ್ಯಕ್ಷ ಎಚ್.ಎಸ್.ನಾಗೇಶ್, ಕಾರ್ಯದರ್ಶಿ ಸಂಪತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.