ADVERTISEMENT

ದಾಬಸ್ ಪೇಟೆ ಸಂತೆ: ಸಮಸ್ಯೆಗಳ ಕಂತೆ

ಮಳೆಗಾಲದಲ್ಲಿ ವ್ಯಾಪಾರಿಗಳಿಗೆ, ಗ್ರಾಹಕರಿಗೆ ರಕ್ಷಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:43 IST
Last Updated 2 ಜೂನ್ 2019, 19:43 IST
ದಾಬಸ್ ಪೇಟೆ ಸಂತೆ ಮೈದಾನ
ದಾಬಸ್ ಪೇಟೆ ಸಂತೆ ಮೈದಾನ   

ದಾಬಸ್ ಪೇಟೆ: ಪ್ರತಿ ಬುಧವಾರ ಬಂತೆಂದರೆ ಇಲ್ಲೊಂದು ಭರ್ಜರಿ ಸಂತೆ. ಲಕ್ಷಾಂತರ ರೂಪಾಯಿಗಳ ವಹಿವಾಟು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ರವರೆಗೂ ವ್ಯಾಪಾರದ ಭರಾಟೆ ಜೋರು. ಆದರೆ, ಈ ಸಂತೆ ಹಲವು ಸಮಸ್ಯೆಗಳ ಬೀಡಾಗಿದೆ.

ನೆಲಮಂಗಲ, ಮಾಗಡಿ, ಕುದೂರು, ಹೊನ್ನುಡಿಕೆ, ಕ್ಯಾತ್ಸಂದ್ರ, ತುಮಕೂರು, ಕೊರಟಗೆರೆ, ಊರ್ಡಿಗೆರೆ, ತ್ಯಾಮಗೊಂಡ್ಲು ಭಾಗಗಳಿಂದ ನೂರಾರು ಮಂದಿ ಇಲ್ಲಿ ವ್ಯಾಪಾರಕ್ಕೆ ಬರುತ್ತಾರೆ. ಸೊಪ್ಪು, ತರಕಾರಿ, ಹಣ್ಣು, ಹೂ, ದಿನಸಿ, ಮೀನು, ಸಿಗಡಿ ಕರಿಮೀನು, ಬಟ್ಟೆ... ಹೀಗೆ ದಿನನಿತ್ಯದ ಬಳಕೆಯ ವಸ್ತುಗಳೆಲ್ಲವೂ ಈ ಸಂತೆಯಲ್ಲಿ ಸಿಗುತ್ತವೆ.

ದಾಬಸ್ ಪೇಟೆಯ ಹತ್ತಾರು ಹಳ್ಳಿಗಳ ಜನ ಸಂತೆಯ ಕಾಯಂ ಗ್ರಾಹಕರು. ಇಲ್ಲಿನ ಕೈಗಾರಿಕಾ ವಲಯದಲ್ಲಿ ಹೊರ ಜಿಲ್ಲೆಗಳ ಹಾಗೂ ರಾಜ್ಯಗಳ ಜನ ಹೆಚ್ಚು ವಾಸ ಮಾಡುತ್ತಿದ್ದಾರೆ. ಅವರನ್ನು ಸಂತೆ ಆಕರ್ಷಿಸಿದೆ.

ADVERTISEMENT

ಕೆರೆಯಂಗಳದಲ್ಲಿ ಸಂತೆ: ಹತ್ತಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಸಂತೆಯು ಹಿಂದೆಲ್ಲ ಚಿಕ್ಕ ಪ್ರಮಾಣದಲ್ಲಿ ನಡೆಯುತ್ತಿತ್ತು. ಜನಸಂಖ್ಯೆ ಹೆಚ್ಚಳದಿಂದ ವ್ಯಾಪಾರಸ್ಥರು ಹೆಚ್ಚಾದ್ದರಿಂದ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಗ್ರಾಹಕ ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ, ಸೋಂಪುರ ಪಂಚಾಯಿತಿಯು 2014–15ನೇ ಸಾಲಿನ ಅನುದಾನ ಬಳಸಿ ಕೆರೆಯಂಗಳವನ್ನು ಸಮತಟ್ಟು ಮಾಡಿ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತು.

ಸಮಸ್ಯೆಗಳು: ಮಳೆಗಾಲದಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ನೆನೆಯದಂತೆ ರಕ್ಷಣೆ ಇಲ್ಲ. ಪ್ಲಾಸ್ಟಿಕ್ ಕವರ್‌ ಅಡಿಯಲ್ಲಿ ವ್ಯಾಪಾರ ಮಾಡಬೇಕಾದ ಅನಿವಾರ್ಯತೆ. ಶೌಚಾಲಯ ಇಲ್ಲದೇ ಪರದಾಡುವಂತಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಸೂಕ್ತ ರಕ್ಷಣೆ ಇಲ್ಲದ್ದರಿಂದ ಹಾಗೂ ಮಳೆ ನೀರು ನಿಲ್ಲುವುದರಿಂದ ಮಳೆಗಾಲದಲ್ಲಿ ಕೂತು ವ್ಯಾಪಾರ ಮಾಡುವುದಕ್ಕೆ ತೊಂದರೆ ಉಂಟಾಗುತ್ತಿದೆ. ಗ್ರಾಹಕರು ತರಕಾರಿ ಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ತರಕಾರಿ ಕೊಳೆಯುತ್ತದೆ. ಹಾಕಿದ ಬಂಡವಾಳ ಬಂದರೆ ಸಾಕು’ ಎಂದು ಮಹಿಳಾ ವ್ಯಾಪಾರಸ್ಥರೊಬ್ಬರು ಹೇಳಿದರು.

‘ಸಂತೆ ನಿರ್ವಹಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂತೆಗಳನ್ನು ಅಭಿವೃದ್ಧಿ ಮಾಡುವುದಷ್ಟೇ ನಮ್ಮ ಕೆಲಸ. ದಾಬಸ್ ಪೇಟೆ ಕೈಗಾರಿಕಾ ವಲಯದಲ್ಲಿ ಎಪಿಎಂಸಿ ನಿರ್ಮಾಣ ಮಾಡುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಿದ್ದೇವೆ’ ಎಂದು ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಗಂಗಣ್ಣ ಹೇಳಿದರು.

‘ಕೆಲ ಸಮಸ್ಯೆಗಳು ಇರುವುದು ನಮ್ಮ ಗಮನಕ್ಕೆ ಬಂದಿದೆ. ನೂರಾರು ವ್ಯಾಪಾರಸ್ಥರು ವ್ಯಾಪಾರ ಮಾಡುವುದರಿಂದ ಜಾಗದ ಸಮಸ್ಯೆ ಇದೆ. ಸೂಕ್ತ ಜಾಗ ಸಿಕ್ಕರೆ ಅಲ್ಲಿಗೆ ಸಂತೆ ವರ್ಗಾವಣೆ ಮಾಡಿ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸುತ್ತೇವೆ’ ಎಂದು ಸೋಂಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.