ADVERTISEMENT

ಹೊಸಕೋಟೆ: ಭೂಮಿ, ವಸತಿ ಹಕ್ಕಿಗಾಗಿ ಪ್ರತಿಭಟನಾ ಧರಣಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:25 IST
Last Updated 19 ಜುಲೈ 2025, 4:25 IST
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ದಲಿತರ ಭೂಮಿ, ವಸತಿ ಹಕ್ಕು ಹಾಗೂ ಇತರೆ ಹಕ್ಕೋತ್ತಾಯಗಳಿಗಾಗಿ ಆಗ್ರಹಿಸಿ ಹೊಸಕೋಟೆ ತಾಲ್ಲೂಕು ಕಚೇರಿ ಮುಂಭಾಗ ಒಂದು ದಿನದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ದಲಿತರ ಭೂಮಿ, ವಸತಿ ಹಕ್ಕು ಹಾಗೂ ಇತರೆ ಹಕ್ಕೋತ್ತಾಯಗಳಿಗಾಗಿ ಆಗ್ರಹಿಸಿ ಹೊಸಕೋಟೆ ತಾಲ್ಲೂಕು ಕಚೇರಿ ಮುಂಭಾಗ ಒಂದು ದಿನದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು   

ಹೊಸಕೋಟೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ದಲಿತರ ಭೂಮಿ, ವಸತಿ ಹಕ್ಕು ಹಾಗೂ ಇತರೆ ಹಕ್ಕೋತ್ತಾಯಗಳಿಗಾಗಿ ಆಗ್ರಹಿಸಿ ನಗರದ ತಾಲ್ಲೂಕು ಕಚೇರಿ ಮುಂಭಾಗ ಒಂದು ದಿನದ ಪ್ರತಿಭಟನಾ ಧರಣಿ ನಡೆಯಿತು.

ಸ್ವಾಭಿಮಾನ ಬದುಕಿಗಾಗಿ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದರೂ ಇಂದು ಬಹುತೇಕ ದಲಿತರಿಗೆ ಸ್ವಂತ ಮನೆ ಇಲ್ಲದ ಸ್ಥಿತಿಯಲ್ಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಕೊರಳೂರು ಶ್ರೀನಿವಾಸ್ ವಿಷಾದಿಸಿದರು.

ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ವಸತಿ ಮತ್ತು ಭೂ ರಹಿತರಿದ್ದಾರೆ. ಇವರು ತಮ್ಮ ವಸತಿ ಮತ್ತು ಭೂ ಹಕ್ಕಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಗೌಪ್ಯವಾಗಿ ತಮಗೆ ಬೇಕಾದವರಿಂದ ಅರ್ಜಿ ಹಾಕಿಸಿ ಅವರಿಗೆ ಭೂಮಿ ನೀಡುತ್ತಿದ್ದಾರೆ. ನಿಜವಾದ ಭೂ, ವಸತಿ ರಹಿತರ ಕನಸು ಕನಸಾಗಿಯೇ ಉಳಿದಿದೆ ಎಂದರು.

ADVERTISEMENT

ತಾಲ್ಲೂಕಿನಾದ್ಯಂತ ವಸತಿ ಮತ್ತು ಭೂ ರಹಿತ ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ಜೊತೆಗೆ ಹಲವು ಗ್ರಾಮಗಳಲ್ಲಿ ಮೇಲ್ವರ್ಗದವರು ದಲಿತರ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದಾರೆ. ಭೂಮಿ ಕಳೆದುಕೊಂಡವರು ಕಚೇರಿಗೆ ಅಲೆದು ಸುಸ್ತಾಗುತ್ತಿದ್ದಾರೆ. ಹಾಗಾಗಿ ಆದಟ್ಟು ಬೇಗ ಈ ಸಮಸ್ಯೆ ಸರಿಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ತಾಲ್ಲೂಕು ಘಟಕದ ಪ್ರಧಾನ ಸಂಚಾಲಕ ಪಿ.ಎಂ.ಚಿನ್ನಸ್ವಾಮಿ ಮಾತನಾಡಿ, ಇಂದು ದೇಶದಾದ್ಯಂತ ದಲಿತರು ವಸತಿ ಮತ್ತು ಸ್ಮಶಾನಕ್ಕಾಗಿ ಹೋರಾಡುತ್ತಿದ್ದಾರೆ. ಭೂಮಿ ಕೆಲವೇ ಮಂದಿ ಕೈಯಲ್ಲಿದೆ. ಜೊತೆಗೆ ಸರ್ಕಾರಿ ಭೂಮಿಯನ್ನು ಬಲಾಢ್ಯರಿಗೆ ಹಂಚುತ್ತಿದ್ದಾರೆ. ದೇಶದ ಬಹುಸಂಖ್ಯಾತ ದಲಿತರು ಇಂದಿಗೂ ಕನಿಷ್ಠ ವಸತಿ ಹಕ್ಕಿಗಾಗಿ ಹೋರಾಡುವಂತಾಗಿದೆ. ಇದು ನಿಲ್ಲಬೇಕು, ಎಲ್ಲಾ ವಸತಿ ಮತ್ತು ಭೂ ರಹಿತರಿಗೆ ಗೌರವಯುತ ಜೀವನ ನಡೆಸಲು ಬೇಕಾದ ಭೂಮಿಯನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪ ತಹಶೀಲ್ದಾರ್ ಪೂರ್ಣಿಮಾ ಅವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಕೆ.ಆರ್.ಮುನಿಯಪ್ಪ, ಬಿಸ್ನಳ್ಳಿ ಮೂರ್ತಿ, ಲಕ್ಷ್ಮಣ್ ನಡವತ್ತಿ, ಪೂಜಪ್ಪ ಕೋಟೂರು, ಅಶ್ವಥ್ ಹಂದೇನಹಳ್ಳಿ, ನಾಗೇಶ್ ದೇವನಗೊಂಡಿ, ರವಿಚಂದ್ರ ಜಡಿಗೇನಹಳ್ಳಿ, ಸುಬ್ರಮಣಿ ಶಶಿಮಾಕನಹಳ್ಳಿ, ಮುರುಗೇಶ್ ಜಿ.ಹಂದೇನಹಳ್ಳಿ ಸೇರಿದಂತೆ ಇತರರು ಇದ್ದರು.

ಉಪ ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.