ADVERTISEMENT

ಆನೇಕಲ್‌ | ಮರಣ ಪ್ರಮಾಣ ಇಳಿಸಲು ಶ್ರಮಿಸಿ: ಜಿಲ್ಲಾಧಿಕಾರಿ

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ: ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 2:33 IST
Last Updated 8 ಅಕ್ಟೋಬರ್ 2020, 2:33 IST
ಆನೇಕಲ್‌ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಸವರಾಜು ಮಾತನಾಡಿದರು
ಆನೇಕಲ್‌ನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಸವರಾಜು ಮಾತನಾಡಿದರು   

ಆನೇಕಲ್: ‘ತಾಲ್ಲೂಕಿನಲ್ಲಿ ಕೊರೊನಾ ಮರಣ ಪ್ರಮಾಣವು ಶೇ 2ರಷ್ಟಿದೆ. ಇದನ್ನು ಕಡಿಮೆ ಮಾಡಲು ಸರ್ಕಾರದ ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಯ ಜೊತೆಗೂಡಿ ಕೆಲಸ ಮಾಡುವ ಮೂಲಕ ಮರಣ ಪ್ರಮಾಣ ಕಡಿಮೆ ಮಾಡಲು ಮುನ್ನೆಚ್ಚರಿಕೆ
ಕ್ರಮ ಕೈಗೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಸವರಾಜು ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ, ಶಿಕ್ಷಣ, ಕಂದಾಯ ಮತ್ತು ಸ್ಥಳೀಯ ಸಂಸ್ಥೆಗಳು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿವೆ. ಸಮೀಕ್ಷೆ, ಜಾಗೃತಿ ಮತ್ತಿತರ ಕಾರ್ಯಗಳಲ್ಲಿ ಸಕ್ರಿಯವಾಗಿವೆ. ಸೋಂಕು ತಡೆಯುವ ನಿಟ್ಟಿನಲ್ಲಿ ಎಲ್ಲಾ ಗ್ರಾಮಗಳಲ್ಲೂ ತಪಾಸಣೆಗಳನ್ನು ಹೆಚ್ಚಿಸಲು ಗ್ರಾಮ ಪಂಚಾಯಿತಿ ಕಾರ್ಯಪಡೆಗಳು ಕಾರ್ಯಪ್ರವೃತರಾಗಬೇಕು. ತಾಲ್ಲೂಕಿನಲ್ಲಿ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಪ್ರತಿ ಆರೋಗ್ಯ ಕೇಂದ್ರದಲ್ಲಿ ಮೂರು ವಾಹನಗಳನ್ನು ನೀಡಲಾಗಿದೆ. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತ್ವರಿತವಾಗಿ ಗ್ರಾಮಗಳಿಗೆ ತೆರಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

‘ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಗಾಗಬೇಕು. ವೈದ್ಯರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಸೋಂಕು ನಿಯಂತ್ರಣ ಮಾಡಲು ಸಾರ್ವಜನಿಕರ ಸಹಕಾರದಿಂದ ಮಾತ್ರ ಸಾಧ್ಯ. ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಸರ್ಕಾರ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕು’ ಎಂದು ಅವರು ಹೇಳಿದರು.

ತಹಶೀಲ್ದಾರ್‌ ಸಿ.ಮಹಾದೇವಯ್ಯ ಮಾತನಾಡಿ ಆನೇಕಲ್‌ ತಾಲ್ಲೂಕಿನಲ್ಲಿ 7352 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಒಟ್ಟು 5660 ಮಂದಿ ಗುಣಮುಖರಾಗಿದ್ದಾರೆ. 159 ಮಂದಿ ಮರಣ ಹೊಂದಿದ್ದಾರೆ. ಪ್ರತಿದಿನ 1500ಕ್ಕೂ ಹೆಚ್ಚು ಮಂದಿಗೆ ಗಂಟಲದ್ರವ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿವೈಎಸ್ಪಿ ಮಹದೇವಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ, ನೋಡಲ್‌ ಅಧಿಕಾರಿ ಡಾ.ವೈಷ್ಣವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.