ADVERTISEMENT

ಆನೆಕಲ್‌ ಗಣಪನಿಗೆ ವಿದೇಶದಲ್ಲೂ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:40 IST
Last Updated 1 ಸೆಪ್ಟೆಂಬರ್ 2019, 16:40 IST
ಆನೇಕಲ್‌ನ ಕಲಾವಿದ ನಂಜುಂಡೇಶ್ವರ ಅವರ ಕುಟುಂಬದವರು ಸಿದ್ದಪಡಿಸುತ್ತಿರುವ ಗಣಪತಿಯ ಮೂರ್ತಿಗಳು
ಆನೇಕಲ್‌ನ ಕಲಾವಿದ ನಂಜುಂಡೇಶ್ವರ ಅವರ ಕುಟುಂಬದವರು ಸಿದ್ದಪಡಿಸುತ್ತಿರುವ ಗಣಪತಿಯ ಮೂರ್ತಿಗಳು   

ಆನೇಕಲ್: ಆನೇಕಲ್‌ನ ಕಲಾವಿದ ನಂಜುಂಡೇಶ್ವರ ಅವರ ಕುಟುಂಬದವರು ಸಿದ್ಧಪಡಿಸಿರುವ ವಿವಿಧ ರೂಪದ ವಿಘ್ನೇಶ್ವರನ ಮೂರ್ತಿಗಳು ಪಟ್ಟಣದ ಆಕರ್ಷಣೆಯಾಗಿದ್ದು ಮಣ್ಣಿನ ಗಣಪತಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹೊರರಾಜ್ಯಗಳಿಂದಲೂ ಬೇಡಿಕೆಯಿದ್ದು ಇವರು ಸಿದ್ಧಪಡಿಸಿರುವ ಗಣಪತಿಗಳು ದೆಹಲಿಗೂ ರವಾನೆಯಾಗಿರುವುದು ವಿಶೇಷ.

ಪಟ್ಟಣದ ಕಲಾವಿದ ನಂಜುಂಡೇಶ್ವರ ಅವರ ಮನೆಯಲ್ಲಿ ತಯಾರಿಸಿರುವ ಬಗೆಬಗೆಯ ಗಣಪನ ಮೂರ್ತಿಗಳು ಹಾಗೂ ಮುದ್ದು ಮುದ್ದಾದ ಗುಂಡು ಗೌರಮ್ಮನ ಮೂರ್ತಿಗಳು ಎಲ್ಲರ ಆಕರ್ಷಣೆಯಾಗಿವೆ. ಐದು ದಶಕಗಳಿಂದಲೂ ವಿಶಿಷ್ಟ ಗಣಪತಿಗಳನ್ನು ತಯಾರು ಮಾಡುವಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿರುವ ಕಲಾವಿದನ ಕೌಶಲದಿಂದ ರೂಪಿಸಿರುವ ಒಂದೊಂದು ಗಣಪತಿಯು ಪುರಾಣದ ವಿವಿಧ ಇತಿಹಾಸಗಳನ್ನು ನೆನಪಿಸುವ ರೀತಿಯಲ್ಲಿ ಹಾಗೂ ಯುವಕರನ್ನು ಸೆಳೆಯುವ ರೀತಿಯಲ್ಲಿ ತಯಾರಾಗಿವೆ.

ಈ ಬಾರಿ ಯಕ್ಷಗಾನ ಗಣಪತಿ, ಮಹಾರಾಷ್ಟ್ರ ಮಾದರಿಯ ದಗಲುಸೇಟ್‌ ಗಣಪ, ವೆಂಕಟೇಶ್ವರ ಗಣಪ, ಆಂಜನೇಯ ಗಣಪ, ಶಂಕು ಗಣಪ, ಶಿವ ಗಣಪ, ತಬಲ ಗಣಪ, ಮಯೂರ ಗಣಪ, ಶಿವಾಜಿ ಗಣಪ ಸೇರಿದಂತೆ ತನ್ನದೇ ಪೌರಾಣಿಕ ಕಲ್ಪನೆಗಳನ್ನು ಮೇಳೈಸಿ ಕಲಾವಿದನ ಕೌಶಲದಿಂದ ತಯಾರಿಸಿದ್ದಾರೆ. ಒಂದೊಂದು ಗಣಪ ಸಹ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಮಣ್ಣಿನಿಂದ ಮಾಡಿರುವ ಪರಿಸರ ಸ್ನೇಹಿ ಗಣಪಗಳು ಈ ವರ್ಷದ ವಿಶೇಷವಾಗಿವೆ. ಯುವಕರನ್ನು ಆಕರ್ಷಸುವ ಪಬ್‌ಜಿ ಗಣಪತಿಗೂ ಈ ವರ್ಷದ ತಯಾರಿಕೆಯಲ್ಲಿ ಸ್ಥಾನ ದೊರೆತಿದೆ.

ADVERTISEMENT

ಆನೇಕಲ್‌ನ ಪಸುವಲಪೇಟೆಯಲ್ಲಿರುವ ಭಜನೆಮನೆ ರಸ್ತೆಯ ಮುತ್ತಮ್ಮ ಅವರ ಕುಟುಂಬಕ್ಕೆ ಗಣಪತಿಗಳನ್ನು ತಯಾರು ಮಾಡುವಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಮುತ್ತಮ್ಮ ಅವರು 60 ವರ್ಷಗಳಿಂದ ಗಣಪತಿಯನ್ನು ತಯಾರು ಮಾಡುವಲ್ಲಿ ನಿರತರಾಗಿದ್ದಾರೆ. ಚಿತ್ರಗಾರ ವೆಂಕಟರಮಣಪ್ಪನವರ ಪುತ್ರಿಯಾದ ಮುತ್ತಮ್ಮ ಅವರು ತಮ್ಮ ಏಳನೇ ವರ್ಷಕ್ಕೆ ತಂದೆಯಿಂದ ಗಣಪತಿಗಳನ್ನು ತಯಾರು ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಕಲಾವಿದ ಡಿಕಾಂಬರಿ ಶಾಮಣ್ಣ ಅವರನ್ನು ಮದುವೆಯಾದ ನಂತರ ಅವರ ಮನೆಯಲ್ಲಿಯೂ ಕಳೆದ 50 ವರ್ಷಗಳಿಂದಲೂ ಗಣಪತಿ ತಯಾರಿಕೆಯ ಕಾಯಕ ಮಾಡುತ್ತಿದ್ದಾರೆ.

ಮಕ್ಕಳಾದ ನಂಜುಂಡೇಶ್ವರ, ವೇಣುಗೋಪಾಲ, ನಾಗರಾಜ, ಸೊಸೆಯರಾದ ಕಾತ್ಯಾಯಿನಿ, ಲೀಲಾವತಿ, ಮಹೇಶ್ವರಿ, ಮೊಮ್ಮಕ್ಕಳಾದ ಚೈತ್ರ, ಮೈತ್ರಾ ಸೇರಿದಂತೆ ಮನೆಮಂದಿಯೆಲ್ಲ ಗೌರಿ ಗಣಪನ ತಯಾರಿಕೆಯಲ್ಲಿ ಪಾಲ್ಗೊಂಡು ತಯಾರು ಮಾಡುವ ಕೌಶಲವನ್ನು ಬೆಳೆಸಿಕೊಂಡಿದ್ದಾರೆ. ಇವರು ತಯಾರಿಸುವ ಗಣಪ ದೇಶ ವಿದೇಶಗಳಿಗೂ ಹೋಗುತ್ತಿರುವುದು ಕಲಾವಿದರ ಕೈಚಳಕಕ್ಕೆ ಹಿಡಿದ ಕನ್ನಡಿಯಾಗಿದೆ. ವಿದೇಶದಲ್ಲಿ ವಾಸವಾಗಿರುವ ಆನೇಕಲ್‌ ಮೂಲದವರು ಮುಂಗಡವಾಗಿ ಗಣಪನ್ನು ಖರೀದಿಸಿ ಕೊಂಡೊಯ್ಯುವ ಪರಂಪರೆ ಬೆಳೆದಿದೆ. ಅಮೆರಿಕ‌, ಆಸ್ಟ್ರೇಲಿಯಾಗಳಿಗೂ ನಾವು ತಯಾರು ಮಾಡಿದ ಗಣಪ ಹೋಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಈ ವರ್ಷ ದೆಹಲಿಯಲ್ಲಿ ವಾಸವಿರುವ ಆನೇಕಲ್‌ ಮೂಲದ ಕುಟುಂಬವೊಂದು ಇಲ್ಲಿಂದ ಗಣಪನನ್ನು ಕೊಂಡೊಯ್ದಿದೆ.

ಮನೆ ಮಂದಿಯೆಲ್ಲಾ ಎರಡು ತಿಂಗಳಿಗೂ ಹೆಚ್ಚು ಕಾಲ ಗೌರಿ ಗಣಪತಿಯ ತಯಾರು ಮಾಡುವ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು 60 ವರ್ಷಗಳಿಂದಲೂ ಗಣಪತಿ ಮೂರ್ತಿಯ ಸಿದ್ದತೆಯಲ್ಲಿ ತೊಡಗಿರುವ ಹಾಗೂ ಗಣಪನ ಮೂರ್ತಿಗಳು ಸಿದ್ದವಾದ ನಂತರ ಅಂತಿಮ ಸ್ಪರ್ಶ ನೀಡುವ ಕಲಾವಿದ ನಂಜುಂಡೇಶ್ವರ ಅವರ ತಾಯಿ ಮುತ್ತಮ್ಮ ಹೇಳುತ್ತಾರೆ.

ಈ ವರ್ಷ 3 ಲೋಡ್‌ ಜೇಡಿ ಮಣ್ಣು ತಂದಿದ್ದು ಆನೇಕಲ್‌ನ ದೊಡ್ಡಕೆರೆ, ಬಾಗೂರು ಕೆರೆ, ಗಣಗಲೂರು ಕೆರೆಯಿಂದ ಮಣ್ಣನ್ನು ತರಿಸಿ ಹದ ಮಾಡಿ ಈ ಮಣ್ಣಿನಲ್ಲಿ ಬಗೆಬಗೆಯ ರೂಪದ ಗಣೇಶನ ಮೂರ್ತಿಗಳನ್ನು ಸಿದ್ದಪಡಿಸಲಾಗಿದೆ. ₹ 100ರಿಂದ ₹ 20 ಸಾವಿರ ವರೆಗೆ ಗಣೇಶನ ಮೂರ್ತಿಗಳ ಬೆಲೆಯಿದೆ. ಗಾತ್ರ, ಶೈಲಿಗಳಿಗೆ ತಕ್ಕಂತೆ ಬೆಲೆ ನಿಗದಿ ಮಾಡಲಾಗುತ್ತದೆ ಎಂದು ಕಲಾವಿದ ನಂಜುಂಡೇಶ್ವರ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.