ADVERTISEMENT

ಪುಟಿದೆದ್ದ ದೇವನಹಳ್ಳಿ ಜಿಲ್ಲಾ ಕೇಂದ್ರ ಹೋರಾಟ

ಶೀಘ್ರ ಘೋಷಿಸಲು ದೇವನಹಳ್ಳಿ ತಾಲ್ಲೂಕು ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 4:04 IST
Last Updated 18 ಆಗಸ್ಟ್ 2022, 4:04 IST
ದೇವನಹಳ್ಳಿಯಲ್ಲಿ ನಡೆದ ಜಿಲ್ಲಾ ಕೇಂದ್ರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು
ದೇವನಹಳ್ಳಿಯಲ್ಲಿ ನಡೆದ ಜಿಲ್ಲಾ ಕೇಂದ್ರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು   

ದೇವನಹಳ್ಳಿ: ತಾಲ್ಲೂಕಿನ ಬೀರಸಂದ್ರದಲ್ಲಿ ಜಿಲ್ಲಾಡಳಿತ ಭವನ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಮಟ್ಟದ ಹಲವು ಇಲಾಖೆಗಳು ದೇವನಹಳ್ಳಿಯಲ್ಲಿವೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ತಿಂಗಳೊಳಗೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುತ್ತೇವೆ ಎಂದು ಭರವಸೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ವಿವಿಧ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ‘ಹೊಸಕೋಟೆಯ ಗಡಿಯಿಂದ ಹಿಡಿದು ನೆಲಮಂಗಲ ಗಡಿಯವರೆಗೂ ಸರ್ವೆ ಮಾಡಿ ಮಧ್ಯಭಾಗವಾದ ದೇವನಹಳ್ಳಿ ತಾಲ್ಲೂಕಿನ ಚಪ್ಪರದಕಲ್ಲಿನ ಬಳಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜಿಲ್ಲಾ ಕೇಂದ್ರ ಘೋಷಣೆಯಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದ ವಿವಾದ ಸೃಷ್ಟಿಸಲಾಗುತ್ತಿದೆ ಎಂದರು.

ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ದೊಡ್ಡಬಳ್ಳಾಪುರದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಹೈಕೋರ್ಟ್‌ನಲ್ಲಿಯೂ ರಿಟ್‌ ಸಲ್ಲಿಸಿದ್ದರು. ಆ ಅರ್ಜಿಯೂ ವಜಾ ಆಗಿದೆ ಎಂದರು.

ADVERTISEMENT

ಜಿಲ್ಲಾ ಕೇಂದ್ರ ಘೋಷಣೆಗಾಗಿ ಎರಡು ತಾಲ್ಲೂಕಿನವರು ವಿಧಾನ ಸೌಧ, ವಿಕಾಸ ಸೌಧದಲ್ಲಿ ನಡೆದ ಸಾಕಷ್ಟು ಸಭೆಗಳಲ್ಲಿ ಪಾಲ್ಗೊಂಡಿದ್ದು, ದೊಡ್ಡಮಟ್ಟದ ಘರ್ಷಣೆಯಾಗಿದೆ. ಎಲ್ಲಾ ಸಂಘಟನೆಗಳ ಹೋರಾಟದ ಫಲವಾಗಿ ತಿಂಗಳಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ ಎಂದರು.

ದೊಡ್ಡಬಳ್ಳಾಪುರದಲ್ಲಿ ಕೈಗಾರಿಕಾ ಪ್ರದೇಶ ಒಳಗೊಂಡಂತೆ ಉಪ ವಿಭಾಗಾಧಿಕಾರಿ ಕಚೇರಿಯಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೊಟೆ ಮಾರ್ಗವಾಗಿ ವ್ಯವಸ್ಥಿತವಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೂ ಕೆಲವು ಸಂಘಟನೆಗಳು ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಒತ್ತಡ ತರುತ್ತಿರುವುದು ಸಮಂಜಸವಲ್ಲ ಎಂದು ಹೇಳಿದರು.

ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಚಂದ್ರಶೇಖರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮುನಿಶಾಮಪ್ಪ, ನಾಗರಿಕ ಹಿತರಕ್ಷಣಾ ವೇದಿಕೆಯ ಮುನಿಕೃಷ್ಣಪ್ಪ, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ (ನಾಣಿ), ರೈತ ಸಂಘದ ಕುಮಾರಪ್ಪ, ಕರವೇ ಟೌನ್‌ ಅಧ್ಯಕ್ಷ ಸುಬ್ರಮಣಿ, ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹನುಮಣ್ಣ, ದೇವನಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಕೆ. ಶಿವಪ್ಪ, ಸಮರ ಸೇನೆ ಉಪಾಧ್ಯಕ್ಷ ಗೋಖರೆ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಮೆಕಾನಿಕ್‌ ಮಂಜುನಾಥ್, ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.