ADVERTISEMENT

ಗಂಗಮ್ಮ ಹಂತಕರ ಬಂಧನಕ್ಕೆ ಒತ್ತಾಯ

ದಲಿತರ ವಿರುದ್ಧದ ದೌರ್ಜನ್ಯಗಳ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 3:54 IST
Last Updated 12 ಜುಲೈ 2022, 3:54 IST
ದೊಡ್ಡಬಳ್ಳಾಪುರದಲ್ಲಿ ರಕ್ಷಣೆಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ಚಿಕ್ಕಮುದ್ದೇನಹಳ್ಳಿ ಗ್ರಾಮದ ಗಂಗಮ್ಮ ಹತ್ಯೆ ಖಂಡಿಸಿ ಹಾಗೂ ದಲಿತರ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು
ದೊಡ್ಡಬಳ್ಳಾಪುರದಲ್ಲಿ ರಕ್ಷಣೆಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ಚಿಕ್ಕಮುದ್ದೇನಹಳ್ಳಿ ಗ್ರಾಮದ ಗಂಗಮ್ಮ ಹತ್ಯೆ ಖಂಡಿಸಿ ಹಾಗೂ ದಲಿತರ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಕ್ಕಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದ ದಲಿತ ಮಹಿಳೆ ಗಂಗಮ್ಮ ಹತ್ಯೆ ಖಂಡಿಸಿ ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈವೇಳೆ ಮಾತನಾಡಿದ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಪಿ.ಎ.ವೆಂಕಟೇಶ್, ‘ಇತ್ತೀಚೆಗೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿರುವುದನ್ನು ಶಾಸಕರಿಗೆ ತಿಳಿಸಿದರೆಂಬ ಕಾರಣಕ್ಕೆ ಗಂಗಮ್ಮ ಅವರ ಮೇಲೆ ದೌರ್ಜನ್ಯ ಮಾಡಲಾಗಿದೆ. ಈ ಪ್ರಕರಣ ಗಂಭೀರ ಸ್ವರೂಪದಾಗಿದ್ದು, ನೊಂದ ಕುಟುಂಬಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಾಗುತ್ತದೆ’ ಎಂದು ಹೇಳಿದರು.

ಗ್ರಾಮದಲ್ಲಿ ನಡೆದ ದಲಿತ ಮಹಿಳೆ ಗಂಗಮ್ಮನವರ ಕೊಲೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲೆ ಇಬ್ಬರು ಕೊಲೆ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಆದರೆ ಇನ್ನೂ ಇಬ್ಬರು ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಎನ್.ರಾಜಣ್ಣ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರಾದ ವೆಂಕಟರಾಜು, ಮಂಜುನಾಥ, ಗೂಳ್ಯಹನುಮಣ್ಣ, ಅಶೋಕ್, ಸಂಜೀವನಾಯಕ್, ಡಿ.ಪಿ.ಆಂಜನೇಯ, ವೆಂಕಟೇಶ್,ಕೊನಘಟ್ಟಮುನಿಕೃಷ್ಣ,ಚನ್ನಿಗರಾಯಪ್ಪ,ಡಿ.ಟಿ.ವೆಂಕಟೇಶ್, ರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.