ADVERTISEMENT

ದೇವನಹಳ್ಳಿ: ಕೆಸರು ಗದ್ದೆಯಾದ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆ

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ರಸ್ತೆ ತುಂಬೆಲ್ಲಾ ಗುಂಡಿಗಳದ್ದೇ ಕಾರುಬಾರು!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 2:49 IST
Last Updated 21 ಸೆಪ್ಟೆಂಬರ್ 2025, 2:49 IST
ಹೊಸಕೋಟೆ- ಗಂಗವಾರ- ಬೂದಿಗೆರೆ- ವಿಮಾನ ನಿಲ್ದಾಣ ರಸ್ತೆ
ಹೊಸಕೋಟೆ- ಗಂಗವಾರ- ಬೂದಿಗೆರೆ- ವಿಮಾನ ನಿಲ್ದಾಣ ರಸ್ತೆ   

ದೇವನಹಳ್ಳಿ: ಪೈರು ನಾಟಿಗೆ ಸಿದ್ಧವಾಗುವ ಕೆಸರಿನ ಗದ್ದೆಯಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ಒಡಲಿನಲ್ಲಿಟ್ಟಿಕೊಂಡಿರುವ ದೇವನಹಳ್ಳಿ ತಾಲ್ಲೂಕಿನ ರಸ್ತೆಗಳು ಸಂಪೂರ್ಣವಾಗಿ ದುಸ್ಥಿತಿಗೆ ತಲುಪಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆಯು ಸಂ‍ಪೂರ್ಣ ಗುಂಡಿಮಯವಾಗಿದೆ.

ಚನ್ನರಾಯಪಟ್ಟಣದ ಗಂಗವಾರ ಚೌಡಪ್ಪನಹಳ್ಳಿ ರಸ್ತೆಯಲ್ಲಿ ರಸ್ತೆಯ ಮೇಲಿರುವ ಡಾಂಬರೀಗಿಂತ ಹೆಚ್ಚು ಬೃಹದಾಕಾರದ ಗುಂಡುಗಳು ಎದ್ದು ಕಾಣುತ್ತಿವೆ. ಇದರಿಂದ ಬೇಸತ್ತ ವಾಹನ ಸವಾರರು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳಲ್ಲಿ ಗುಂಡಿಗಳದ್ದೆ ಕಾರುಬಾರು ಎಂದು ಕೆ.ಎಚ್‌.ಮುನಿಯಪ್ಪ ಅವರ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭವಾಗಿದೆ.

ADVERTISEMENT

ಸ್ಥಳೀಯರು ನಿತ್ಯ ಇದೇ ರಸ್ತೆಗಳನ್ನು ಉಪಯೋಗಿಸಿಕೊಂಡು ದೇವನಹಳ್ಳಿ ಪಟ್ಟಣ ಸೇರಿದಂತೆ ಬೆಂಗಳೂರಿಗೆ ಓಡಾಡಬೇಕು. ಆದರೆ ಶುಭ್ರವಾದ ಬಟ್ಟೆ ತೊಟ್ಟು ಮನೆಯಿಂದ ಹೊರ ಬಂದರೆ ನಮ್ಮ ಗಮ್ಯ ಸ್ಥಾನ ಸೇರುವಷ್ಟರಲ್ಲಿ ಭಾಗಶಃ ಕೆಸರುಮಯವಾಗಿತ್ತದೆ ಎನ್ನುತ್ತಾರೆ ವಾಹನ ಸವಾರರು.

ಗುಂಡಿರಸ್ತೆಗೆ ಸಿ.ಎಂ, ಸಚಿವರ ಹೆಸರು:ದೇವನಹಳ್ಳಿಯಲ್ಲಿರುವ ಇಂತಹ ಗುಂಡುಯುಕ್ತ ರಸ್ತೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಎಚ್.ಮುನಿಯಪ್ಪ ಅವರ ಹೆಸರಿಡಿ, ಅವರ ಕೆಲಸಗಳು ಮುಂದಿನ ಪೀಳಿಗೆಗೂ ತಿಳಿಯಲಿ ಎಂದು ರತ್ನಕರ ಹೊಳ್ಳ ಲೇವಡಿ ಮಾಡಿದ್ದಾರೆ.

ಬೈಕ್ ಬಿಟ್ಟು, ಬೋಟ್‌ ಖರೀದಿ: ‘ಸರ್ಕಾರದವರು ಇಂಗು ಗುಂಡಿಗಳನ್ನು ಈಗ ರಸ್ತೆಯ ಮೇಲೆ ನಿರ್ಮಿಸಿದರೇ ನಾವು ದ್ವಿಚಕ್ರ ವಾಹನ ಬಿಟ್ಟು, ಹೊಸದೊಂದು ಬೋಟ್‌ ಖರೀದಿ ಮಾಡಬೇಕು ಅದಕ್ಕೆನಾದರೂ ಸಬ್ಸಿಡಿ ಸಿಗುತ್ತಾ’ ಎಂದು ರಾಘವೇಂದ್ರ ಶೆಟ್ಟಿ ಆಡಳಿತ ವರ್ಗಕ್ಕೆ ಪ್ರಶ್ನೆ ಕೇಳಿದ್ದಾರೆ.

ರಸ್ತೆಗಳ ಪರಿಸ್ಥಿತಿ ಕಂಡರೂ ಕಾಣದಂತಿರುವ ಜನಪ್ರತಿನಿಧಿಗಳಿಗೆ ಜಾವಾಬ್ದಾರಿಯೇ ಇಲ್ಲ, ಭ್ರಷ್ಟಾಚಾರದಲ್ಲಿ ಮುಳಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬೈಚಾಪುರ ಶಶಿಧರ್‌ ಆರೋಪಿಸಿದರು.

ಯಮಸ್ವರೂಪಿ ಗುಂಡಿಗಳಿಗೆ ಮುಕ್ತ ಯಾವಾಗ?: ಯಮಸ್ವರೂಪಿ ಗುಂಡಿಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ರಸ್ತೆ ಗುಂಡಿಗಳು ಜನರ ಜೀವಕ್ಕೆ ಕಂಟಕವಾಗಿದ್ದು, ಈ ಸಮಸ್ಯೆಗಳಿಗೆ ಯಾವಾಗ ಮುಕ್ತಿ ಸಿಗುತ್ತದೆ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಗ್ರಾಮದ ರಸ್ತೆ -ಗಂಗವಾರದಿಂದ - ಚೌಡಪ್ಪನಹಳ್ಳಿ ಮಾರ್ಗವಾಗಿ ಬೂದಿಗೆರೆ ಸಂಪರ್ಕಿಸುವ ರಸ್ತೆ ಹಳ್ಳ ಕೊಳ್ಳಗಳು ದೊಡ್ಡ ಗುಂಡಿಗಳು ವಾಹನ ಸವಾರರು ಪರದಾಡುವಂತಾಗಿದೆ. ಶಾಲೆಗಳಿಗೆ ಹೋಗುವ ಮಕ್ಕಳ ಶೂ ಮತ್ತೆ ಬಟ್ಟೆಗಳು ಕೊಳಕಾಗುತ್ತವೆ.  ದಯವಿಟ್ಟು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಕಾರ್ಯ ಮಾಡಿಸಿ. ಕೆ ಎಚ್. ಮುನಿಯಪ್ಪ ಅವರೇ ದಯವಿಟ್ಟು ಗಮನ ಹರಿಸಿ ಎಂದು ಸ್ಥಳೀಯ ಶಶಿಕುಮಾರ್ ಆಗ್ರಹಿಸಿದ್ದಾರೆ.

ಜೆಡಿಎಸ್‌ ಸಾಮಾಜಿಕ ಜಾಲತಾಣದಲ್ಲಿ ‘ಪ್ರಜಾವಾಣಿ ವರದಿ’ ಬಳಸಿ ಆಂದೋಲನ ನಡೆಸುತ್ತಿರುವ ಪೋಸ್ಟ್‌
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ

‘ಪ್ರಜಾವಾಣಿ’ ವರದಿ

ಪೋಸ್ಟ್‌ ಮಾಡಿದ ಜೆಡಿಎಸ್‌ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಜೆಡಿಎಸ್‌ ರಸ್ತೆ ದುರಸ್ತಿಗೆ ಒತ್ತಾಯಿಸಿದೆ. ಬಹುತೇಕ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಟಾರು ಕಿತ್ತುಬಂದಿದ್ದು ಗುಂಡಿಗಳಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಆದಷ್ಟು ಬೇಗ ಶಾಸಕರು ಮತ್ತು ಅಧಿಕಾರಗಳು ಈ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಜೆಡಿಎಸ್‌ ಸಾಮಾಜಿಕ ಜಾಲತಾಣದಲ್ಲಿ ಸಚಿವ ಕೆ.ಎಚ್‌.ಮುನಿಯಪ್ಪರನ್ನು ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.